ರಾಂಚಿ, ಏ. 20 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ಕೆಲವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಲು ಸಫಲರಾದರೆ, ಇನ್ನು ಕೆಲವರು ಹಲವು ಪ್ರಯತ್ನಗಳ ನಂತರ ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ತಮ್ಮ ಮೂರನೇನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವೈಭವ್ ಕುಮಾರ್ ಅವರ ಸ್ಫೂರ್ತಿದಾಯಕ ಕತೆ ಇದು.

ವೈಭವ್ ಕುಮಾರ್ ಅವರು ರಾಂಚಿ ಮೂಲದವರು. ವೈಭವ್ ಎಂಬಿಎ ಮುಗಿಸಿದ ನಂತರ ಮುಂಬೈನ ಸಿಟಿಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿದ್ದರು. ಆದರೆ ಕಾರ್ಪೊರೇಟ್ ಜೀವನದ ಐಷಾರಾಮಿ ಸೌಲಭ್ಯಗಳಿಗಿಂತ ಬಾಲ್ಯದ ಕನಸನ್ನು ನನಸು ಮಾಡಿಕೊಳ್ಳುವ ಹಂಬಲ ಉಂಟಾಯಿತು. ಹೀಗಾಗಿ ಬ್ಯಾಂಕ್ ಮ್ಯಾನೇಜರ್ ವೃತ್ತಿಯನ್ನು ತ್ಯಜಿಸಿ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ.
ವೈಭವ್ ಅವರು ಪ್ರತಿದಿನ 10 ರಿಂದ 12 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಮೊದಲ ಎರಡು ಪ್ರಯತ್ನಗಳಲ್ಲಿ ವೈಭವ್ ಹಿನ್ನಡೆ ಅನುಭವಿಸಿದರು. 2024ರಲ್ಲಿ ಮೂರನೇ ಬಾರಿಗೆ ಪರೀಕ್ಷೆ ಬರೆದ ಅವರು, 90ನೇ ಅಖಿಲ ಭಾರತ ರ್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಯಶಸ್ವಿಯಾದರು.
"ನಾನು ನೇರವಾಗಿ ಜನರೊಂದಿಗೆ ಕೆಲಸ ಮಾಡಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಬಯಸಿದ್ದೆ. ಅದಕ್ಕಾಗಿಯೇ ನನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣ ಸಮಯದ ತಯಾರಿ ನಡೆಸಲು ನಿರ್ಧರಿಸಿದೆ" ಎಂದು ವೈಭವ್ ತಿಳಿಸಿದ್ದಾರೆ.