ಬೆಂಗಳೂರು, ಏ. 19 (DaijiworldNews/AA): ನಾವು ಮಹಿಳಾ ಮೀಸಲಾತಿ ಪರವಾಗಿಯೇ ಇದ್ದೇವೆ. ಮೋದಿ ಅವರ ಹೇಳಿಕೆಯನ್ನ ವಿರೋಧಿಸ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಮಿತ್ರ ಪಕ್ಷಗಳಿಂದ ಭ್ರೂಣ ಹತ್ಯೆ' ಎನ್ನುವ ಪ್ರಧಾನಿ ಹೇಳಿಕೆಯನ್ನು ಖಂಡಿಸಿದರು. ಮಹಿಳಾ ಮೀಸಲಾತಿ ರಿಕರ್ವೇಶನ್ ಬಿಲ್ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಬಿಲ್ ಎರಡು ಬೇರೆ ಬೇರೆ, ಆದ್ರೆ ಇವರು ಬೇರೆ ರೀತಿ ಬಿಂಬಿಸಿದ್ದಾರೆ" ಎಂದು ಹೇಳಿದರು.
"ಕ್ಷೇತ್ರ ಪುನರ್ ವಿಂಗಡೆನೆ ಮಸೂದೆ ವಿಫಲವಾಗಿದೆ. ಇದು ಎಸ್ಸಿ-ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗುತ್ತೆ. ದಕ್ಷಿಣ ಭಾರತದ ರಾಜ್ಯಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಇದನ್ನ ನಾವು ಎಲ್ಲಾ ಪಕ್ಷಗಳು ವಿರೋಧ ಮಾಡಿದ್ದೇವೆ" ಎಂದರು.
"ಮಹಿಳಾ ಮೀಸಲಾತಿ ಬಿಲ್ ಡಿಲಿಮೇಟೇಷನ್ ಬಿಲ್ಗೆ ವ್ಯತ್ಯಾಸವಿದೆ. ಮೋದಿ ಅವರು 2023 ರಲ್ಲಿ ನಾರಿ ಶಕ್ತಿ ಬಿಲ್ ಮಂಡನೆ ಮಾಡಿದ್ರು, ಇದಕ್ಕೆ ಎಲ್ಲಾ ಪಕ್ಷದ ನಾಯಕರು ಸಹಮತ ವ್ಯಕ್ತಪಡಿಸಿದ್ರು. 40 ತಿಂಗಳಾದ್ರೂ ಇದನ್ನ ಮೋದಿ ಯಾಕೆ ಮುಂಚೂಣಿಗೆ ತಂದಿರಲಿಲ್ಲ? ಏಕೆ ಅಧಿಸೂಚನೆ ಹೊರಡಿಸರಲಿಲ್ಲ? ಇದನ್ನ ನಾನು ಖಂಡಿಸ್ತಿನಿ. ಮೋದಿ ಅವರು ರಾಜಕೀಯ ದಾಳ ಉರುಳಿಸ್ತಿದ್ದಾರೆ. ನಾವು ಮಹಿಳಾ ಮೀಸಲಾತಿಯ ಪರವಾಗಿ ಇದ್ದೇವೆ. ಪ್ರಧಾನಿ ಮೋದಿ ಅವರ ಸುಳ್ಳು ಆರೋಪಗಳನ್ನು ಖಂಡಿಸುತ್ತೇನೆ. 2010 ರಲ್ಲಿ ಈ ಬಿಲ್ ರಾಜ್ಯಸಭೆಯಲ್ಲಿ ಮಂಡನೆ ಮಾಡಿದ್ವು ನಾವು, ಬಹುಮತ ಇಲ್ಲದೇ ಈ ಬಿಲ್ ಪಾಸ್ ಆಗಲಿಲ್ಲ" ಎಂದು ತಿಳಿಸಿದರು.
"ಬಿಜೆಪಿಯವರ ತತ್ವಸಿದ್ಧಾಂತ ಭಯಂಕರವಾಗಿದೆ. ನೆಹರು ಅವರು ಈ ಬಿಲ್ ಪಾಸ್ ಮಾಡೋಕೆ ಮುಂದಾಗಿದ್ರು. ಸರೋಜಿನಿ ನಾಯ್ಡು ನಮ್ಮ ಪಕ್ಷದ ಮೊದಲ ಮಹಿಳಾ ಅಧ್ಯಕ್ಷರಾಗಿದ್ರು, ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ರು, ಸೋನಿಯಾ ಗಾಂಧಿ ಅವರು ಪಕ್ಷವನ್ನ ಮುನ್ನಡೆಸಿದ್ದಾರೆ. ನಾವು ಮಹಿಳೆಯರಿಗೆ ಆದ್ಯತೆ ಕೊಟ್ಟಿದ್ದೇವೆ. ಪ್ರಧಾನಿ ಮೋದಿಯವರ ಸುಳ್ಳು ಆರೋಪಗಳನ್ನ ಖಂಡಿಸುತ್ತೇನೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.