ಬೆಂಗಳೂರು, ಏ. 19 (DaijiworldNews/AA): ಮಹಿಳಾ ಮೀಸಲಾತಿ ಮಸೂದೆ ಸೋಲಲು ಕಾರಣರಾದ ಕಾಂಗ್ರೆಸ್ ಪಕ್ಷ ಹಾಗೂ ಅವರ ಮಿತ್ರ ಪಕ್ಷದವರನ್ನು ದೇಶದ ತಾಯಂದಿರು ಮತ್ತು ಸೋದರಿಯರು ಯಾವತ್ತೂ ಕ್ಷಮಿಸಲಾರರು ಎಂದು ಸಂಸದ ಮತ್ತು ಕೇಂದ್ರದ ಮಾಜಿ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಾರಿ ಶಕ್ತಿ ವಂದನ್ ಅಧಿನಿಯಮ ಮಸೂದೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಮೋಸದ ಕುರಿತು ಅವರು ವಿವರಿಸಿದರು. ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷಗಳು 5ನೇ ಬಾರಿ ಮಹಿಳಾ ಮೀಸಲಾತಿ ಮಸೂದೆಯನ್ನು ತಡೆದಿವೆ. ಮಸೂದೆ ಬಿದ್ದ ನಂತರ ಈ ಪಕ್ಷದವರು ಸಂತಸ ಸೂಚಿಸಿದ್ದಾರೆ" ಎಂದು ತಿಳಿಸಿದರು.
"ಈ ಮಸೂದೆಗೆ ಸಂಬಂಧಿಸಿದಂತೆ 2 ದಿನ ಚರ್ಚೆ ನಡೆದಿತ್ತು. 2023ರಲ್ಲಿ ವಿಪಕ್ಷಗಳು 2024ರ ಚುನಾವಣೆ ಕಾರಣಕ್ಕಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿದ್ದವು. ಮೊನ್ನೆ ಮಸೂದೆ ಮತಕ್ಕೆ ಹಾಕಿದಾಗ ಕಾಂಗ್ರೆಸ್ಸಿನವರು ಮಹಿಳೆಯರ ಹಿಂದಿನಿಂದ ಬಂದು ಚೂರಿಯಿಂದ ಇರಿಯುವ ಕೆಲಸ ಮಾಡಿದ್ದಾರೆ. ಈ ಪಕ್ಷಗಳು ದೇಶದ ಶೇ.50ರಷ್ಟಿರುವ ಮಹಿಳೆಯರಿಗೆ ದ್ರೋಹವೆಸಗಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
"ಇಂಡಿ ಒಕ್ಕೂಟದ ಪಕ್ಷಗಳ ಮಹಿಳಾ ವಿರೋಧಿ ಮಾನಸಿಕ ಸ್ಥಿತಿ ಅನಾವರಣಗೊಂಡಿದೆ. ಕುಟುಂಬ ಆಧಾರಿತ ಕೌಟುಂಬಿಕ ನಿರ್ವಹಣೆಯ ಪಕ್ಷಗಳು ದೆಹಲಿಯ ಮಹಿಳೆಯೇ ಆಗಿದ್ದರೂ ವಯನಾಡಿನಿಂದ ಸ್ಪರ್ಧಿಸಲು ಅವಕಾಶ ಕೊಡುತ್ತವೆ. ಇತರ ಮಹಿಳೆಯರ ಸ್ಥಿತಿ ಹೀಗಿಲ್ಲ ಎಂದು ವಿವರಿಸಿದರು. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯವು ಸಹಜ ಹಕ್ಕಾಗಿದೆ. ಈ ಹಕ್ಕು ನೀಡುವಲ್ಲಿ ವಿಳಂಬವಾಗಿದ್ದು, ಇದಕ್ಕೆ ಕಾಂಗ್ರೆಸ್ ಮತ್ತಿತರ ಪಕ್ಷಗಳೇ ಕಾರಣ" ಎಂದರು.