ಕೋಲ್ಕತ್ತಾ, ಏ. 19 (DaijiworldNews/AA): ಲೋಕಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿ ನಿರಾಕರಿಸಲು ಟಿಎಂಸಿ ಕಾಂಗ್ರೆಸ್ ಜೊತೆಗೆ ಪಿತೂರಿ ನಡೆಸುತ್ತಿದೆ. ಈ ಮೂಲಕ ಬಂಗಾಳದ ಮಹಿಳೆಯರಿಗೆ ದ್ರೋಹ ಬಗೆದಿದೆ. ಮುಂಬರುವ ಚುನಾವಣೆಗಳಲ್ಲಿ ಈ ಪಕ್ಷವನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟಿಎಂಸಿ ವಿರುದ್ಧ ಕಿಡಿಕಾರಿದ್ದಾರೆ.

ಬಂಕುರಾದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ನೀವು ಸಂಸತ್ತಿನಲ್ಲಿ ನೋಡಿದ್ದೀರಿ, ಟಿಎಂಸಿ ಮತ್ತೊಮ್ಮೆ ಬಂಗಾಳದ ಮಹಿಳೆಯರಿಗೆ ದ್ರೋಹ ಬಗೆದಿದೆ. ನುಸುಳುಕೋರರ ಲಾಭಕ್ಕಾಗಿ ಕಾನೂನು ಮತ್ತು ನಿಯಮಗಳನ್ನ ಪದೇ ಪದೇ ಮುರಿತುವ ಅದೇ ಟಿಎಂಸಿ ಇದು. ಧರ್ಮ ಆಧಾರಿತ ಮೀಸಲಾತಿಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿರುವ ಪಕ್ಷವೂ ಇದೇ ಆಗಿದೆ. ಹಾಗೇ ಮಾಡೋದ್ರಿಂದ, ಸಂವಿಧಾನದ ಚೈತನ್ಯ ದುರ್ಬಲಗೊಳ್ಳುತ್ತದೆ" ಎಂದು ತಿಳಿಸಿದರು.
"ಮುಂಬರುವ ಬಂಗಾಳದ ಚುನಾವಣೆ ಹೊಸ ಇತಿಹಾಸ ಸೃಷ್ಟಿಸಲಿದೆ. ಟಿಎಂಸಿ ನಾಯಕರು ಬಳಸುತ್ತಿರುವ ಭಾಷೆಗಳನ್ನ ನೋಡಿದ್ರೆ ಫಲಿತಾಂಶದ ಬಗ್ಗೆ ಅವರಿಗೆ ಇರುವ ಭಯವನ್ನು ತೋರಿಸುತ್ತದೆ. ನಾನು ಎಲ್ಲಾ ಟಿಎಂಸಿ ಗೂಂಡಾಗಳು, ಸಿಂಡಿಕೇಟ್ಗಳು ಮತ್ತು ಭ್ರಷ್ಟರಿಗೆ ಕೊನೇ ಅವಕಾಶ ನೀಡುತ್ತಿದ್ದೇನೆ. ಏಪ್ರಿಲ್ 29 ಕ್ಕೂ ಮೊದಲು ನಿಮ್ಮ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಶರಣಾಗಿ, ಮೇ 4 ರ ನಂತರ ಯಾರಿಗೂ ಉಳಿಗಾಲ ಇರೋದಿಲ್ಲ" ಎಂದು ಎಚ್ಚರಿಸಿದರು.
"ಟಿಎಂಸಿ ಬುಡಕಟ್ಟು ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನ ದ್ವೇಷಿಸುತ್ತದೆ. ನಾವು ಬುಡಕಟ್ಟು ಸಮುದಾಯವನ್ನ ಸಬಲೀಕರಣಗೊಳಿಸಲು ಬಯಸುತ್ತೇವೆ. ಅದಕ್ಕಾಗಿಯೇ ಬಿಜೆಪಿ ದೇಶಕ್ಕೆ ತನ್ನ ಮೊದಲ ಬುಡಕಟ್ಟು ಮಹಿಳಾ ಅಧ್ಯಕ್ಷೆಯನ್ನ ನೀಡಿತು. ಆದರೆ ಟಿಎಂಸಿ ಬುಡಕಟ್ಟು ಸಮುದಾಯವನ್ನು ಅವಮಾನಿಸುತ್ತದೆ. ಭಾರತದ ರಾಷ್ಟ್ರಪತಿ ಬುಡಕಟ್ಟು ಸಮುದಾಯದವರಾಗಬೇಕೆಂದು ಎಂದಿಗೂ ಬಯಸಲಿಲ್ಲ. ಇಂದು, ಇಡೀ ಜಗತ್ತು ರಾಷ್ಟ್ರಪತಿ ಮುರ್ಮು ಅವರನ್ನ ಗೌರವಿಸುತ್ತದೆ, ಆದರೆ ಬುಡಕಟ್ಟು ವಿರೋಧಿ ಟಿಎಂಸಿ ಅವರನ್ನ ಅವಮಾನಿಸುತ್ತದೆ" ಎಂದು ವಾಗ್ದಾಳಿ ನಡೆಸಿದರು.