ಬೆಂಗಳೂರು, ಏ. 19 (DaijiworldNews/TA): ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಚಾರವಾಗಿ ಉಂಟಾದ ರಾಜಕೀಯ ಸಂಘರ್ಷ ತೀವ್ರಗೊಂಡಿದ್ದು, ಡಿ.ಕೆ. ಶಿವಕುಮಾರ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಮಹಿಳಾ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿರುವ ಬಿಜೆಪಿಯ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದರು.

“ಮಹಿಳಾ ಮೀಸಲಾತಿ ಅವರೊಬ್ಬರ ಆಸ್ತಿ ಅಲ್ಲ. ಸೋಲ್ತೀವಿ ಅಂತ ಗೊತ್ತಿದ್ದೂ ಮಸೂದೆ ತಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಾವು ಪ್ರತಿನಿಧಿಗಳಲ್ಲವಾ? ನಮ್ಮ ಜೊತೆ ಚರ್ಚೆ ಮಾಡದೇ ಯಾಕೆ ಬಿಲ್ ತಂದರು?” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸದಸ್ಯರನ್ನು ಒಳಗೊಂಡು ಇತರ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೇ ಮಸೂದೆ ಮುಂದಿಟ್ಟಿರುವುದನ್ನು ಅವರು ಟೀಕಿಸಿದರು. “ಇನ್ನೂ 240 ಜನರನ್ನು ನಾವು ಗೆದ್ದಿದ್ದೇವೆ. ಅವರ ಜೊತೆ ಮಾತುಕತೆ ನಡೆಸಬೇಕಿತ್ತು. ಏನು ಮಾಡ್ತಿದ್ದೇವೆ ಎಂದು ಹೇಳಬೇಕಿತ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಭಾರತಕ್ಕೆ ಹೆಚ್ಚು ಕ್ಷೇತ್ರಗಳನ್ನು ಹೆಚ್ಚಿಸುವ ಹಾಗೂ ದಕ್ಷಿಣ ಭಾರತದ ಕ್ಷೇತ್ರಗಳನ್ನು ಕಡಿಮೆ ಮಾಡುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ ಅವರು, “ಇದನ್ನು ಯಾರೂ ಸಹಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
ಈ ವಿಚಾರವಾಗಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ದಕ್ಷಿಣ ಭಾರತದ ಸಂಸದರು ನಡೆಸಿದ ಪ್ರತಿಭಟನೆಗೆ ಇದು ದೊಡ್ಡ ಜಯ ಎಂದು ಅವರು ತಿಳಿಸಿದ್ದಾರೆ. “ಅವಮಾನ ನಮಗೆ ಆಗಿಲ್ಲ. ಮಹಿಳಾ ಪರವಾಗಿ ನಿಂತಿರುವುದು ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟ” ಎಂದು ಡಿಕೆಶಿ ಸ್ಪಷ್ಟಪಡಿಸಿದರು.