ಬೆಂಗಳೂರು, ಏ. 19 (DaijiworldNews/TA): ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆಗೆ ಕಾರಣವಾಗುವ ಮಹತ್ವದ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ಹೊಸ ವ್ಯವಸ್ಥೆಗೆ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಕ್ರಮ ಜಾರಿಯಾದಲ್ಲಿ ವಿಸ್ಕಿ, ರಮ್, ಜಿನ್, ಬ್ರಾಂಡಿ ಸೇರಿದಂತೆ ಸಾಮಾನ್ಯವಾಗಿ ಬಳಕೆಯಲ್ಲಿರುವ ಮದ್ಯಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಕನಿಷ್ಠ ಶೇ.20ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಹೊಸ ನಿಯಮದ ಪ್ರಕಾರ, ಮದ್ಯದಲ್ಲಿನ ಆಲ್ಕೋಹಾಲ್ ಪ್ರಮಾಣ (AIB) ಹೆಚ್ಚು ಇದ್ದರೆ ಅದರ ಮೇಲೆ ವಿಧಿಸುವ ತೆರಿಗೆಯೂ ಹೆಚ್ಚಾಗಲಿದೆ. ಇದರಿಂದ ಕರ್ನಾಟಕದಲ್ಲಿ ತಯಾರಾಗುವ ಇಂಡಿಯನ್ ಮೇಡ್ ಲಿಕರ್ (IML) ಬೆಲೆಯ ಮೇಲೂ ನೇರ ಪರಿಣಾಮ ಬೀಳಲಿದೆ.
ಈಗಾಗಲೇ ಮದ್ಯ ಮಾರಾಟವನ್ನು MRP ಆಧಾರದ ಮೇಲೆ ವಿವಿಧ ಸ್ಲ್ಯಾಬ್ಗಳಲ್ಲಿ ವಿಂಗಡಿಸಲಾಗಿದ್ದು, ಹೊಸ ವ್ಯವಸ್ಥೆ ಜಾರಿಯಾದರೆ ಕಡಿಮೆ ಆದಾಯ ವರ್ಗದವರು ಬಳಸುವ ಮೊದಲ ನಾಲ್ಕು ಸ್ಲ್ಯಾಬ್ಗಳ ಮದ್ಯವೇ ಹೆಚ್ಚು ದುಬಾರಿ ಆಗಲಿದೆ. ಈ ವರ್ಗದ ಮದ್ಯಗಳಲ್ಲಿ ಸರಾಸರಿ ಆಲ್ಕೋಹಾಲ್ ಪ್ರಮಾಣ ಶೇ.42.8ರಷ್ಟಿದ್ದು, ಒಟ್ಟು ಎಕ್ಸೈಸ್ ಆದಾಯದಲ್ಲಿ ಶೇ.80ರಷ್ಟು ಪಾಲು ಹೊಂದಿದೆ.
ಕಳೆದ ವರ್ಷ 180 ಮಿಲಿ ಮದ್ಯದ ಬೆಲೆ ರೂ. 80ರಿಂದ ರೂ. 95ರವರೆಗೆ ಏರಿಕೆಯಾಗಿದ್ದರೆ, ಹೊಸ ತೆರಿಗೆ ವ್ಯವಸ್ಥೆ ಜಾರಿಯಾದಲ್ಲಿ ಇದೇ ಮದ್ಯದ ಬೆಲೆ ರೂ. 105ರಿಂದ ರೂ. 110ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.
ಸುಮಾರು ಆರು ದಶಕಗಳ ಹಳೆಯ ಮದ್ಯ ತೆರಿಗೆ ನೀತಿಯಲ್ಲಿ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದ್ದು, ಈ ಕ್ರಮ ಜಾರಿಯಾದರೆ ಕರ್ನಾಟಕ ರಾಜ್ಯವು ಆಲ್ಕೋಹಾಲ್-ಇನ್-ಬೇವರೇಜ್ (AIB) ಆಧಾರಿತ ತೆರಿಗೆ ವ್ಯವಸ್ಥೆ ಜಾರಿಗೊಳಿಸುವ ದೇಶದ ಮೊದಲ ರಾಜ್ಯವಾಗಲಿದೆ. ಪಾಶ್ಚಾತ್ಯ ದೇಶಗಳಲ್ಲಿ ಈ ವ್ಯವಸ್ಥೆ ಇದ್ದರೂ, ಭಾರತದಲ್ಲಿ ಇದು ಮೊದಲ ಪ್ರಯೋಗವಾಗಲಿದೆ.
ಇದೇ ವೇಳೆ ಕರ್ನಾಟಕ ಬ್ರೂವರ್ಸ್ ಮತ್ತು ಡಿಸ್ಟಿಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಕುಮಾರ್ ಪರಸಾ ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಜನರು ಬಳಸುವ ಮದ್ಯವೇ ಹೆಚ್ಚು ದುಬಾರಿ ಆಗಲಿದ್ದು, ಮಾರುಕಟ್ಟೆಯ ಮೇಲೆ ಪರಿಣಾಮ ಬೀಳಬಹುದು ಎಂದು ತಿಳಿಸಿದ್ದಾರೆ.
ಈ ಕುರಿತು ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುವುದು. ಅಂತಿಮ ಅಧಿಸೂಚನೆ ಹೊರಬರುವ ಮುನ್ನ ನಮ್ಮ ಸಲಹೆಗಳನ್ನು ಪರಿಗಣಿಸುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.