ಮುಂಬೈ, ಏ. 14 (DaijiworldNews/AK): ರಾಜ್ಯದ ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸಲಾಗಿದೆ. ಚಾಲಕರು ಕಡ್ಡಾಯವಾಗಿ ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು, ಇಲ್ಲದಿದ್ದರೆ ಅವರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಈ ನಿಯಮವನ್ನು ಮಹಾರಾಷ್ಟ್ರ ದಿನವಾದ ಮೇ 1 ರಿಂದ ರಾಜ್ಯಾದ್ಯಂತ ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ಪುನರುಚ್ಚರಿಸಿದ್ದಾರೆ. ಪ್ರತಾಪ್ ಸರ್ನಾಯಕ್ ಅವರು ಮಾತನಾಡಿ, ಮಹಾರಾಷ್ಟ್ರ ದಿನಾಚರಣೆಯ ಜೊತೆಜೊತೆಗೆ ಮೇ 1 ರಿಂದ ಪರವಾನಗಿ ಪಡೆದ ಎಲ್ಲಾ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಮರಾಠಿ ಭಾಷೆಯನ್ನು ತಿಳಿದುಕೊಳ್ಳುವುದು ಕಡ್ಡಾಯವಾಗಲಿದೆ. ಚಾಲಕರು ಭಾಷೆಯನ್ನು ಓದಲು ಮತ್ತು ಬರೆಯಲು ಸಾಧ್ಯವೇ ಎಂದು ಪರಿಶೀಲಿಸಲು ಮೋಟಾರ್ ಸಾರಿಗೆ ಇಲಾಖೆಯ 59 ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ಕಚೇರಿಗಳ ಮೂಲಕ ರಾಜ್ಯಾದ್ಯಂತ ತಪಾಸಣಾ ಅಭಿಯಾನವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಪರವಾನಗಿ ನೀಡಲು ಸ್ಥಳೀಯ ಭಾಷೆಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಯಮವು ಈಗಾಗಲೇ ಜಾರಿಯಲ್ಲಿದ್ದರೂ ವ್ಯಾಪಕವಾಗಿ ಉಲ್ಲಂಘಿಸಲಾಗುತ್ತಿದೆ. ಈ ಕಠಿಣ ಕ್ರಮವು ಚಾಲಕರಿಗೆ ಮಾತ್ರ ಸೀಮಿತವಾಗಿಲ್ಲ. ಈ ನಿಯಮಗಳನ್ನು ನಿರ್ಲಕ್ಷಿಸಿ ತಪ್ಪಾಗಿ ಪರವಾನಗಿಗಳನ್ನು ನೀಡಿದ ಸಾರಿಗೆ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.