ತುಮಕೂರು, ಏ. 14 (DaijiworldNews/AA): ಸಂಪುಟ ಪುನರ್ ರಚನೆಯ ಸುಳಿವು ಇದೆ. ಈ ಮುನ್ಸೂಚನೆ ಇರೋದರಿಂದಲೇ 30 ಜನ ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿಗೆ ಹೋಗಿದ್ದಲ್ವಾ ಎಂದು ಹೇಳುವ ಮೂಲಕ ಸಂಪುಟ ಪುನಾರಚನೆ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೂರ್ನಾಲ್ಕು ಬಾರಿ ಶಾಸಕರಾದವರು ಸಚಿವ ಸ್ಥಾನ ಕೇಳೋದು ಅವರ ಹಕ್ಕು ಅದರಲ್ಲಿ ತಪ್ಪೇನಿಲ್ಲ. ಆದರೆ ಸಿಎಂ ಬದಲಾವಣೆ ವಿಚಾರ ಆಗಲಿ ಅಥವಾ ಸಂಪುಟ ಪುನಾರಚನೆ ಆಗಲಿ ಎಲ್ಲವೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ" ಎಂದು ಹೇಳಿದರು.
"ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ತಡೆಯುವ ಸಲುವಾಗಿಯೇ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ನೇಮಕ ಮಾಡಿದ್ದು. ಅವರು ಎಲ್ಲಾಕಡೆಯೂ ಹುಡುಕಿ ಹುಡುಕಿ ಶುದ್ಧ ಮಾಡುತ್ತಿದ್ದಾರೆ. ಆ ಅಕ್ರಮಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಹಾಗಾಗಿಯೇ ಎಫ್ಐಆರ್ ಆಗುತ್ತಿದೆ" ಎಂದರು.