ಬೆಂಗಳೂರು,ಏ. 14 (DaijiworldNews/AK):ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದಸಂವಿಧಾನ ಶಿಲ್ಪಿ ಭಾರತ ರತ್ನ ಮಹಾ ಮಾನವತಾವಾದಿ ಬಾಬಾಸಾಹೇಬ್ ಡಾII ಬಿ ಆರ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಹಾಗೂ ಡಾII ಬಿ ಆರ್ ಅಂಬೇಡ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು, "ಜಾತಿ ವ್ಯವಸ್ಥೆ ಇರುವವರೆಗೂ ಅಸ್ಪೃಶ್ಯತೆ ಇರುತ್ತದೆ , ಸಮಾಜಿಕ , ಆರ್ಥಿಕ ಅಸಮಾನತೆ ಇರುವವರೆಗೆ ಜಾತೀಯತೆ ಇರಲಿದೆ" ಎಂದು ಸ್ಪಷ್ಟವಾಗಿ ಹೇಳಿದ್ದರು ಎಂದರು.
ದೌರ್ಜನ್ಯಕ್ಕೆ ಒಳಗಾದ ಎಲ್ಲರ ಪರವಾಗಿ ಹೋರಾಟ
ಅಂಬೃಡ್ಕರ್ ಅವರು, ಎಲ್ಲಾ ದಮನಿತರ, ಪರಿಶಿಷ್ಟ ವರ್ಗಗಳ, ಶೋಷಿತರ, ಅವಕಾಶ ವಂಚಿತ ಜನರ ಪರವಾಗಿ ಹೋರಾಟವನ್ನು ತಮ್ಮ ಜೀವನದುದ್ದಕ್ಕೂ ಮಾಡಿದ್ದರು. ಕೇವಲ ದಲಿತರ ನಾಯಕರಾಗಿರದೆ ಅವಕಾಶ ವಂಚಿತರ, ದೌರ್ಜನ್ಯಕ್ಕೆ ಒಳಗಾದ ಎಲ್ಲರ ಪರವಾಗಿ ಹೋರಾಟ ಮಾಡಿದ್ದರು ಎಂದರು.
ಜಗತ್ತಿನ ಶ್ರೇಷ್ಠ ಸಂವಿಧಾನ
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನದ ಮೂಲಕ ಎಲ್ಲಾ ಭಾರತೀಯರಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದ್ದರಿಂದಲೇ ದೇಶದ ಸಂವಿಧಾನವನ್ನು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ ಎಂದರು.
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನೋವಿನ ಸಂಗತಿ
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿದೆ ಇರುವುದು ನೋವಿನ ಸಂಗತಿ ಎಂದ ಮುಖ್ಯಮಂತ್ರಿಗಳು, ಸಮಾಜಿಕ ,ಆರ್ಥಿಕ ಅಸಮಾನತೆಯಿರುವ ಈ ಸಮಾಜದಲ್ಲಿ ಇವುಗಳನ್ನು ಹೋಗಲಾಡಿಸದಿದ್ದರೆ ದೇಶಕ್ಕೆ ಸ್ವಾತಂತ್ರ ಬಂದಿರುವುದು ಯಶಸ್ವಿಯಾಗಲಾರದು ಎಂದು ಅಂಬೇಡ್ಕರ್ ಸ್ಪಷ್ಟವಾಗಿ ನಡೆದಿದ್ದರು ಎಂದರು.
ಹಿಂದೂ ಧರ್ಮದ ಸುಧಾರಣೆಗಾಗಿ ಪ್ರಯತ್ನ
ಅಂಬೇಡ್ಕರ್ ವಿದ್ವಾಂಸರಾಗಿದ್ದರೂ ದಮನಿತರ ಪರವಾಗಿ ಹೋರಾಡಿದರಲ್ಲದೆ, ಹಿಂದೂ ಧರ್ಮದ ಸುಧಾರಣೆಗಾಗಿ ಬಹಳ ಪ್ರಯತ್ನ ಮಾಡಿದರು. ಆದರೆ ಕಡೆಗೆ ಅದು ಕೈಗೂಡದೆ ಹಿಂದೂ ಧರ್ಮವನ್ನು ತ್ಯಜಿಸಿದರು. ಅಸಮಾನತೆಗೆ ಕಾರಣವಾದ ಮನುವಾದವನ್ನು ತಿರಸ್ಕರಿಸಿದ್ದರು ಎಂದರು.
ಎಲ್ಲ ಸಂಕೋಲೆಗಳಿಂದ ವಿಮುಕ್ತರಾಗಲು ಶಿಕ್ಷಣ ಒಂದೇ ಪ್ರಬಲ ಅಸ್ತ್ರ
ಸಾಮಾಜಿಕ, ಆರ್ಥಿಕ ಶಕ್ತಿ ಎಲ್ಲರಿಗೂ ದೊರಕಿದಾಗ ಮಾತ್ರ ಸ್ವಾವಲಂಬನೆ ಸಾಧ್ಯ. ಎಲ್ಲ ಸಂಕೋಲೆಗಳಿಂದ ವಿಮುಕ್ತರಾಗಲು ಶಿಕ್ಷಣ ಒಂದೇ ಪ್ರಬಲ ಅಸ್ತ್ರ ಎಂದು ಅಂಬೇಡ್ಕರ್ ಸಾರಿದ್ದರು ಎಂದರು.