ಬಸ್ತಿ, ಏ. 14 (DaijiworldNews/AA): ಆಂಬ್ಯುಲೆನ್ಸ್ ಸಿಬ್ಬಂದಿಯ ಅತಿಯಾದ ಆತ್ಮವಿಶ್ವಾಸ, ನಿರ್ಲಕ್ಷ್ಯಕ್ಕೆ ಏಳು ತಿಂಗಳ ಹಸುಗೂಸಿನ ತಲೆ ತಾಯಿಯ ಗರ್ಭದಲ್ಲೇ ಉಳಿದ ದಾರುಣ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.

ಏಳು ತಿಂಗಳ ಗರ್ಭಿಣಿ ಪ್ರೇಮಾ ದೇವಿಗೆ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿತ್ತು. ಆಸ್ಪತ್ರೆಗೆ ತಲುಪಲು ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಾಗ, ಮಹಿಳೆಯ ನೋವು ಹೆಚ್ಚಾಗಿದೆ. ಈ ವೇಳೆ ಆಂಬ್ಯುಲೆನ್ಸ್ನಲ್ಲಿದ್ದ ಆಶಾ ಕಾರ್ಯಕರ್ತೆ, ವೈದ್ಯರಿಗಾಗಿ ಕಾಯುವ ಬದಲು ತಾನೇ ಹೆರಿಗೆ ಮಾಡಿಸಲು ಮುಂದಾಗಿದ್ದಾಳೆ.
ಮಹಿಳೆಗೆ ನೋವು ನಿವಾರಕ ಇಂಜೆಕ್ಷನ್ ನೀಡಿ, ಬಲವಂತವಾಗಿ ಸಾಮಾನ್ಯ ಹೆರಿಗೆ ಮಾಡಲು ಆಶಾಕಾರ್ಯಕರ್ತೆ ಪ್ರಯತ್ನಿಸಿದ್ದಾಳೆ. ಈ ವೇಳೆ ಮಗುವಿನ ದೇಹ ಹೊರಬಂದಿದ್ದು, ತಲೆ ಮಾತ್ರ ಗರ್ಭದ ಒಳಗೇ ಸಿಲುಕಿಕೊಂಡಿದೆ. ಸಿಬ್ಬಂದಿ ಬಲವಂತವಾಗಿ ಎಳೆದ ಪರಿಣಾಮ, ಮಗುವಿನ ದೇಹ ಮತ್ತು ತಲೆ ಬೇರ್ಪಟ್ಟು, ಮಗುವಿನ ದೇಹ ಕೈಗೆ ಬಂದಿದೆ.
ಮಗು ಸಾವನ್ನಪ್ಪಿದ್ದನ್ನು ಕಂಡು ಭಯಭೀತರಾದ ಆರೋಗ್ಯ ಕಾರ್ಯಕರ್ತರು, ಸತ್ಯವನ್ನು ಮರೆಮಾಚಿ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿಂದ ಅವರನ್ನು ಜಿಲ್ಲಾ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು.
ಜಿಲ್ಲಾಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಮಾಡಿದ ವೇಳೆ ತಾಯಿಯ ಗರ್ಭದೊಳಗೆ ಮಗುವಿನ ಕತ್ತರಿಸಿದ ತಲೆ ಇರುವುದು ಪತ್ತೆಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ತಲೆಯನ್ನು ಹೊರತೆಗೆದಿದ್ದು, ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆ ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.