ಬೆಂಗಳೂರು, ಏ. 13 (DaijiworldNews/AK): ಸ್ವಾತಂತ್ರ್ಯ ಬಂದ ನಂತರ ಸಂವಿಧಾನ ಶಿಲ್ಪಿ ಡಾ. ಬಿರ್ ಅಂಬೇಡ್ಕರ್ ಅವರಿಗೆ ಗೌರವ ನೀಡಿದ್ದು ಭಾರತೀಯ ಜನತಾ ಪಕ್ಷ. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ಜಯಂತಿಯ ಪ್ರಯುಕ್ತ ಗಾಂಧಿನಗರದ ಸನ್ರೈಸ್ ಸರ್ಕಲ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆ ಬಳಿ ದೀಪೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಜನ್ಮಭೂಮಿ, ಕರ್ಮಭೂಮಿ ಸೇರಿದಂತೆ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಅಭಿವೃದ್ಧಿಪಡಿಸಿ ಅವರ ಕನಸು ನನಸಾಗುವ ಪುಣ್ಯದ ಕೆಲಸವನ್ನು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಾ ಇದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ದಲಿತರನ್ನು, ಶೋಷಿತರನ್ನು ಕೇವಲ ಮತಬ್ಯಾಂಕ್ ಆಗಿ ದುರ್ಬಳಕೆ ಮಾಡಿಕೊಳ್ಳುತ್ತಾ ಇದೆ. ಶೋಷಿತ ಸಮಯದಾಯಗಳಿಗೆ ಅನ್ಯಾಯ ಮಾಡುತ್ತಾ ಇದೆ ಎಂದು ಟೀಕಿಸಿದರು.
ಡಾ. ಬಿ ಆರ್ ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ನಾಳೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರ ಅಪೇಕ್ಷೆಯಂತೆ ಪ್ರಧಾನಿಯವರ ಮಾರ್ಗದರ್ಶನದಲ್ಲಿ ಇಡೀ ದೇಶದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅಂಬೇಡ್ಕರ್ ಅವರ ಸಂದೇಶವನ್ನು ನಾಡಿಗೆ, ಜನರಿಗೆ ತಲುಪಿಸುವ ಉದ್ದೇಶವನ್ನು ಬಿಜೆಪಿ ಇಟ್ಟುಕೊಂಡಿದೆ ಎಂದರು.