ಗಾಂಧಿನಗರ, ಏ. 13 (DaijiworldNews/AA): ವೇಗವಾಗಿ ಬಂದ ಟ್ರಕ್ ಯಾತ್ರಿಕರ ಮೇಲೆ ಹರಿದ ಪರಿಣಾಮ 6 ಯಾತ್ರಿಕರು ಸೇರಿದಂತೆ 7 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಗುಜರಾತ್ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ.

ರಾಜ್ಕೋಟ್ನ ಗಡ್ಕಾ ಗ್ರಾಮದಿಂದ ದೇಕಾವಾಲಾದಲ್ಲಿರುವ ದೇವಸ್ಥಾನಕ್ಕೆ ಯಾತ್ರಿಕರ ಗುಂಪು ಕಾಲ್ನಡಿಗೆಯಲ್ಲಿ ತೆರಳುತ್ತಿತ್ತು. ಸುರೇಂದ್ರನಗರದ ಭಾಸ್ಕರ್ಪಾರ ಬಳಿಯ ಲಖ್ತಾರ್-ವಿರಮ್ಗಮ್ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಸುಮಾರು ಹತ್ತು ಜನರಿಗೆ ಢಿಕ್ಕಿ ಹೊಡೆದಿದೆ. ರಸ್ತೆಬದಿಯಲ್ಲಿ ಡಂಪರ್ ಟ್ರಕ್ ಟೈರ್ ಬದಲಾವಣೆಗಾಗಿ ನಿಲ್ಲಿಸಲಾಗಿತ್ತು. ಇದನ್ನು ದಾಟುತ್ತಿದ್ದ ವೇಳೆ ಯಾತ್ರಿಕರ ಮೇಲೆ ಹಿಂದಿನಿಂದ ಬಂದ ಟ್ರಕ್ ಹರಿದಿದೆ. ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ.
ಅಪಘಾತದ ತೀವ್ರತೆಗೆ ಆರು ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದರು. ಕೂಡಲೇ ಸ್ಥಳದಲ್ಲಿದ್ದವರು ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಟ್ರಕ್ ಟೈರ್ ಬದಲಾಯಿಸುತ್ತಿದ್ದ ಚಾಲಕನ ಮೇಲೂ ಟ್ರಕ್ ಹರಿದಿದ್ದು, ವಿರಾಮ್ಗಮ್ನ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾನೆ.