ದಾವಣಗೆರೆ,ಏ. 01 (DaijiworldNews/AK): ಅಹಿಂದ ವರ್ಗದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಅಹಿಂದ ವರ್ಗಕ್ಕೆ ನಿರಂತರವಾಗಿ ಅನ್ಯಾಯ ಮಾಡ್ತಾ ಬಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಪೂರೈಸಿದರೂ ಜನಸಾಮಾನ್ಯರ ಯಾವುದೇ ವರ್ಗಕ್ಕೆ ನ್ಯಾಯ ಕೊಡುವಲ್ಲಿ ವಿಫಲವಾಗಿದೆ ಎಂದು ಶಾಸಕ ವಿ ಸುನಿಲ್ ಕುಮಾರ್ ಅವರು ಆರೋಪಿಸಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಸಮಾರಂಭದಲ್ಲಿ ನಾನು ಅಹಿಂದದ ಹಿತವನ್ನು ಕಾಪಾಡುತ್ತೇನೆ, ಅಹಿಂದ ವರ್ಗವನ್ನು ಉಳಿಸುತ್ತೇನೆ ಎಂದು ಹೇಳುತ್ತಾ ಬಂದ ಮುಖ್ಯಮಂತ್ರಿಗಳು ನಿರಂತರವಾಗಿ ಅಹಿಂದ ವರ್ಗಕ್ಕೆ ಮೋಸ ಮಾಡಿದರು ಎಂದರು.
ತಮ್ಮ ರಾಜಕೀಯ ಭಾಷಣಕ್ಕೆ ಅಹಿಂದವನ್ನು ಬಳಸಿಕೊಂಡ ಸಿಎಂ ಆ ವರ್ಗಕ್ಕೆ ಯಾವುದೇ ರೀತಿ ನ್ಯಾಯ ಕೊಡಲಿಲ್ಲ. ಈ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಸಂಪೂರ್ಣ ವಿಫಲವಾಗಿದೆ. ಕಳೆದ ವರ್ಷದ ಯೋಜನೆಯಲ್ಲಿ ಹಿಂದುಳಿದ ವರ್ಗದ ಬೇರೆ ಬೇರೆ ನಿಗಮಗಳಿಗೆ ಘೋಷಣೆ ಮಾಡಿದ ಹಣವನ್ನು ಬಿಡುಗಡೆ ಮಾಡಲಿಲ್ಲ. ಇದನ್ನು ಸರ್ಕಾರದ ಅಂಕಿ ಅಂಶಗಳೇ ಹೇಳುತ್ತಿವೆ. ಘೋಷಣೆಯಲ್ಲಿ ದೊಡ್ಡ ಪ್ರಚಾರ ಪಡೆಯುವ ಸರ್ಕಾರ, ನಿಗಮದ ಹತ್ತಾರು ಯೋಜನೆಗಳಿಗೆ ಅನುದಾನ ಕಡಿತ ಮಾಡಿದೆ. ಸಿದ್ದರಾಮಯ್ಯ ಅವರು ಘೋರ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ದಾವಣಗೆರೆಗೆ ಬಂದ ಸಿದ್ದರಾಮಯ್ಯ ಅವರು ಅಹಿಂದ ವರ್ಗಕ್ಕೆ ನಾನು ದೊಡ್ಡ ಸಹಾಯ ಮಾಡಿದೆ ಎಂದು ಹೇಳುತ್ತಾರೆ. ಅಹಿಂದಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅನ್ಯಾಯ ಮಾಡುವ ಕಾಂಗ್ರೆಸ್ ಅನ್ನು, ಈ ವರ್ಗದ ಹಿತ ಕಾಪಾಡದ ಸರ್ಕಾರವನ್ನು ಈ ಬಾರಿ ಚುನಾವಣೆಯಲ್ಲಿ ಮತದಾರರು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.
ಸಮೀಕ್ಷಾ ವರದಿಗಳು ಮೂಲೆಗುಂಪು
ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮಧುಸೂಧನ್ ನಾಯಕ್ ವರದಿ ಮೂಲೆ ಗುಂಪಾಗಿದೆ. ಸೆಪ್ಟೆಂಬರ್ ನಲ್ಲಿ ಸಮೀಕ್ಷೆ ಮಾಡಿದ್ರು. ಒಂದು ತಿಂಗಳಲ್ಲಿ ವರದಿ ಕೊಡ್ತೀವಿ ಎಂದಿದ್ದರು. ಈಗ ಏಪ್ರಿಲ್ ಬಂದಿದೆ. ಸಿಎಂ ಅವರು ಸಮೀಕ್ಷೆಯ ವರದಿ ಬಗ್ಗೆ ಚಕಾರ ಎತ್ತುತ್ತಿಲ್ಲ. ಇದೇ ರೀತಿ 2014 ರ ಕಾಂತರಾಜು ವರದಿ, 2025 ರ ಜಯಪ್ರಕಾಶ್ ಹೆಗ್ಡೆ ವರದಿಗಳನ್ನು ಕಾರಣ ಇಲ್ಲದೇ ಕಸದ ಬುಟ್ಟಿಗೆ ಹಾಕಿದರು. ಅದೇ ರೀತಿ ಪರಿಸ್ಥಿತಿ ಮಧುಸೂಧನ್ ನಾಯಕ್ ವರದಿಗೂ ಬರಲಿದೆ. ರಾಜ್ಯದ ಜನರ 500 ಕೋಟಿ ತೆರಿಗೆ ಹಣ ಬಳಸಿ ಈ ಸಮೀಕ್ಷೆ ಮಾಡಿದ್ದರು. ಬಜೆಟ್ನಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾವು ಈ ಬಗ್ಗೆ ಕೇಳಿದರೂ ಮೌನಜಾಣ ಮಾಡಿದ್ದಾರೆ. ಈ ಮೂಲಕವೂ ರಾಜ್ಯದ ಹಿಂದುಳಿದ ವರ್ಗಕ್ಕೆ ದೊಡ್ಡ ಪ್ರಮಾಣ ಅನ್ಯಾಯ ಮಾಡಲಾಗಿದೆ ಎಂದರು.