ನವದೆಹಲಿ, ಏ. 01 (DaijiworldNews/AA): ಪೆಟ್ರೋಲ್, ಡೀಸೆಲ್ ಕೊರತೆ ವದಂತಿ ಬೆನ್ನಲ್ಲೇ ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಇದೀಗ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಪ್ರೀಮಿಯಂ ಪೆಟ್ರೋಲ್ ಮತ್ತು ಜೆಟ್ ಇಂಧನಗಳ ಬೆಲೆಯೂ ಏರಿಕೆಯಾಗಿದೆ.

ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆ ವಿಮಾನ ಇಂಧನ ಬೆಲೆ ದುಪ್ಪಟ್ಟಾಗಿದೆ. 1 ತಿಂಗಳ ಹಿಂದೆ ಜೆಟ್ ಇಂಧನ ಪ್ರತಿ ಕಿಲೋಲೀಟರ್ 96,638.14 ರೂ. ಇದ್ದ ಬೆಲೆ ಇದೀಗ ಪ್ರತಿ ಕಿಲೋಲೀಟರ್ 2,07,341.22 ರೂ.ಗೆ ಏರಿಕೆಯಾಗಿದೆ.
ದೆಹಲಿಯಲ್ಲಿ ಇಂಡಿಯನ್ ಆಯಿಲ್ XP100 ಪೆಟ್ರೋಲ್ (ಪ್ರೀಮಿಯಂ ರೂಪಾಂತರ) ಮತ್ತು ಎಕ್ಸ್ಟ್ರಾ ಗ್ರೀನ್ (ಪ್ರೀಮಿಯಂ ಡೀಸೆಲ್) ಬೆಲೆಗಳನ್ನು ಹೆಚ್ಚಿಸಿದೆ. XP100 ಪೆಟ್ರೋಲ್ ಬೆಲೆಯನ್ನು 149 ರೂ. ನಿಂದ 160 ರೂ.ಗಳಿಗೆ ಹೆಚ್ಚಿಸಲಾಗಿದೆ. XP100 ಭಾರತದ ಮೊದಲ 100-ಆಕ್ಟೇನ್ ಪ್ರೀಮಿಯಂ ಪೆಟ್ರೋಲ್ ಆಗಿದೆ. ಐಷಾರಾಮಿ ಕಾರುಗಳು ಮತ್ತು ಸೂಪರ್ ಬೈಕ್ಗಳಿಗೆ ವಿನ್ಯಾಸಗೊಳಿಸಲಾದ ಪೆಟ್ರೋಲ್ ಇದಾಗಿದ್ದು, ಉತ್ತಮ ಎಂಜಿನ್ ಕಾರ್ಯಕ್ಷಮತೆ ಹೊಂದಿದೆ. ಅದೇ ರೀತಿ, ಎಕ್ಸ್ಟ್ರಾ ಗ್ರೀನ್ (ಪ್ರೀಮಿಯಂ ಡೀಸೆಲ್) ಅನ್ನು 91.49 ರೂ. ನಿಂದ 92.99 ರೂ.ಗಳಿಗೆ ಏರಿಕೆಯಾಗಿದೆ.