ಗುವಾಹಟಿ, ಮಾ. 31 (DaijiworldNews/AA): ಅಸ್ಸಾಂ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆ - ಸಂಕಲ್ಪ ಪತ್ರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುವಾಹಟಿಯಲ್ಲಿ ಇಂದು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, "ಅಸ್ಸಾಂ, ದೇಶದ ಅತ್ಯಂತ ವೇಗದ ಆರ್ಥಿಕತೆ ಹೊಂದಿರುವ ರಾಜ್ಯವಾಗಿದೆ. ಇಲ್ಲಿ ತಲಾ ಆದಾಯ ಕಳೆದ ನಾಲ್ಕು ವರ್ಷಗಳಲ್ಲಿ ಶೇಕಡ ೫೪ರಷ್ಟು ಹೆಚ್ಚಾಗಿದೆ. ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅಸ್ಸಾಂನಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದ್ದು, ಅದು ನಿರಂತರವಾಗಿ ನಡೆಯುತ್ತಿದೆ" ಎಂದರು.
ಅಸ್ಸಾಂನ ಅಭಿವೃದ್ಧಿಯ ಅಂಕಿ-ಅಂಶಗಳನ್ನು ನೀಡಿದ ಅವರು, "ಬಂಡವಾಳ ಹೂಡಿಕೆ ಮತ್ತು ಪ್ರಗತಿ ಎರಡರಲ್ಲೂ ಅಸ್ಸಾಂ ಸಾಕಷ್ಟು ಮುಂದಿದೆ. 2015-16ರಲ್ಲಿ ರಾಜ್ಯದ GSDP 2.24 ಲಕ್ಷ ಕೋಟಿಯಷ್ಟಿತ್ತು. ಅದು 2025-26ರಲ್ಲಿ 7.41 ಲಕ್ಷ ಕೋಟಿಗೆ ಏರಿಕೆಯಾಗಿದೆ. 6 ದಶಕಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಸಾಧಿಸಲಾಗದ್ದನ್ನು ಕಳೆದ 10 ವರ್ಷಗಳಲ್ಲಿ ಅಸ್ಸಾಂ ಸಾಧಿಸಿದೆ ಎಂದು ಹೇಳಿದರು.
ಬಿಜೆಪಿ, ಇದೀಗ ಜನರ ಮುಂದಿಟ್ಟಿರುವ ಸಂಕಲ್ಪ ಪತ್ರದ ಪ್ರಣಾಳಿಕೆ - ನಾವು ಏನು ಭರವಸೆ ನೀಡಿದ್ದೆವೋ, ಏನು ಅಭಿವೃದ್ಧಿ ಮಾಡಿದ್ದೇವೆ ಹಾಗೂ ಮುಂದೆ ಏನು ಮಾಡಲಿದ್ದೇವೆ ಎಂಬುದರ ದಿಕ್ಸೂಚಿಯಾಗಿದೆ. ಈ ಪ್ರಣಾಳಿಕೆ ಭರವಸೆಗಳನ್ನು ಈಡೇರಿಸಿ, ಸಮಗ್ರ ಅಭಿವೃದ್ಧಿಯನ್ನು ಮಾಡುವ ಸಂಕಲ್ಪವಾಗಿದೆ ಎಂದು ತಿಳಿಸಿದರು.