ದೆಹಲಿ, ಮಾ. 31 (DaijiworldNews/AA): ವಿಶ್ವದ ಅತಿ ದೊಡ್ಡ ಜನಗಣತಿಯನ್ನು ಏಪ್ರಿಲ್ 1ರಿಂದ ದೇಶಾದ್ಯಂತ ಎರಡು ಹಂತಗಳಲ್ಲಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತ ಮೃತ್ಯುಂಜಯ ಕುಮಾರ್ ನಾರಾಯಣ ದೆಹಲಿಯಲ್ಲಿಂದು ಹೇಳಿದ್ದಾರೆ.

ಮೊದಲ ಬಾರಿಗೆ ಜನಗಣತಿಯನ್ನು ಡಿಜಿಟಲ್ ರೂಪದಲ್ಲಿ ನಡೆಸಲಾಗುತ್ತಿದೆ. ಸ್ವಯಂ ಗಣತಿ ಆಯ್ಕೆಯೂ ಲಭ್ಯವಿರಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ದೆಹಲಿ, ಗೋವಾ, ಕರ್ನಾಟಕ, ಲಕ್ಷದ್ವೀಪ, ಮಿಜೋರಾಂ, ಒಡಿಶಾ ಮತ್ತು ಸಿಕ್ಕಿಂನಲ್ಲಿ ಏಪ್ರಿಲ್ 1ರಿಂದ 15ರ ವರೆಗೆ ಸ್ವಯಂ ಗಣತಿ ಮತ್ತು ಏಪ್ರಿಲ್ 16ರಿಂದ ಮೇ 15ರ ವರೆಗೆ ಮನೆ ಪಟ್ಟಿ ಮತ್ತು ವಸತಿ ಗಣತಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ದೇಶದ ಜನಗಣತಿಯನ್ನು 1948ರ ಜನಗಣತಿ ಕಾಯಿದೆ ಮತ್ತು ತಿದ್ದುಪಡಿ ಮಾಡಲಾದ 1990ರ ಜನಗಣತಿ ನಿಯಮಗಳ ಅಡಿಯಲ್ಲಿ ನಡೆಸಲಾಗುತ್ತದೆ. ಕೊನೆಯ ಬಾರಿಗೆ 2011ರಲ್ಲಿ ಜನಗಣತಿ ನಡೆಸಲಾಗಿತ್ತು ಎಂದರು.
2027ರ ಜನಗಣತಿ ನಡೆಸಲು 2025ರ ಜೂನ್ 16ರಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಜಮ್ಮು - ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಅಕ್ಟೋಬರ್ 1ರಿಂದ ಗಣತಿ ಆರಂಭವಾಗಲಿದೆ. ಜನಗಣತಿಗೆ ಕೇಂದ್ರ ಸರ್ಕಾರ 11 ಸಾವಿರದ 718 ಕೋಟಿ ರೂಪಾಯಿ ಅನುಮೋದನೆ ನೀಡಿದೆ. ಮೊಬೈಲ್ ಆ್ಯಪ್ ಮತ್ತು ಸ್ವಯಂ ಗಣತಿ ಪೋರ್ಟಲ್ ಹಿಂದಿ, ಇಂಗ್ಲೀಷ್ ಸೇರಿದಂತೆ 16 ಭಾಷೆಯಲ್ಲಿ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದ್ದಾರೆ.