ನವದೆಹಲಿ, ಮಾ. 31 (DaijiworldNews/AA): ದೇಶದಲ್ಲಿ ಕಳೆದ 12 ವರ್ಷಗಳಲ್ಲಿ 10,000ಕ್ಕೂ ಅಧಿಕ ನಕ್ಸಲೀಯರು ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ. ದೇಶವನ್ನು ನಕ್ಸಲ್ ಮುಕ್ತಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿಂದು ಹೇಳಿದ್ದಾರೆ.

ದೇಶವನ್ನು ಎಡಪಂಥೀಯ ಉಗ್ರವಾದದಿಂದ ಮುಕ್ತಗೊಳಿಸುವ ಪ್ರಯತ್ನಗಳ ಕುರಿತು ನಡೆಯುತ್ತಿರುವ ಚರ್ಚೆಗೆ ಉತ್ತರಿಸಿದ ಸಚಿವರು, 2025ರಲ್ಲಿ 2,300 ನಕ್ಸಲೀಯರು ಶಸ್ತ್ರಾಸ್ತ್ರ ತ್ಯಾಗ ಮಾಡಿದ್ದಾರೆ. 2026ರ ಮೊದಲ 3 ತಿಂಗಳಲ್ಲಿ 630ಕ್ಕೂ ಹೆಚ್ಚು ಜನ ಸಶಸ್ತ್ರ ಹೋರಾಟ ಬಿಟ್ಟು ಮುಖ್ಯ ವಾಹಿನಿ ಜೀವನ ಆರಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಕ್ಸಲಿಸಂ ವಿರುದ್ಧ ಏಕೀಕೃತ, ಬಹುಮುಖ ಮತ್ತು ದೃಢವಾದ ತಂತ್ರವನ್ನು ಅಳವಡಿಸಿಕೊಂಡಿರುವುದರಿಂದ ಇದು ಸಾಧ್ಯವಾಗಿದೆ. 48 ನಕ್ಸಲ್ ಪ್ರಭಾವಿತ ಜಿಲ್ಲೆಗಳಲ್ಲಿ 495 ಕೋಟಿ ರೂಪಾಯಿ ವೆಚ್ಚದಲ್ಲಿ ಕೌಶಲಾಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಿದೆ ಎಂದು ಮಾಹಿತಿ ನೀಡಿದರು.
ಮಾವೋವಾದಿ ಪ್ರಭಾವಿತ ಪ್ರದೇಶಗಳಲ್ಲಿ 15,000 ಕಿಲೋ ಮೀಟರ್ ರಸ್ತೆ ನಿರ್ಮಿಸಲಾಗಿದೆ. ಒಂದು ಕಾಲದ ನಕ್ಸಲ್ ಪ್ರಾಬಲ್ಯದ ಪ್ರದೇಶಗಳಲ್ಲಿ ಪೊಲೀಸ್ ಸ್ಟೇಷನ್ಗಳ ಸಂಖ್ಯೆ 2014ರಲ್ಲಿದ್ದ 66 ರಿಂದ ಕಳೆದ 10 ವರ್ಷಗಳಲ್ಲಿ 586ಕ್ಕೆ ಏರಿದೆ. ಕಳೆದ 6 ವರ್ಷಗಳಲ್ಲಿ 361 ಹೊಸ ಭದ್ರತಾ ಘಟಕಗಳು ಮತ್ತು 68 ರಾತ್ರಿ ಲ್ಯಾಂಡಿಂಗ್ ಹೆಲಿಪ್ಯಾಡ್ಗಳನ್ನುನಿರ್ಮಿಸಲಾಗಿದೆ. ಇದರ ಪರಿಣಾಮವಾಗಿ ನಕ್ಸಲ್ ಘಟನೆಗಳು ಅತಿ ಹೆಚ್ಚು ದಾಖಲಾಗುತ್ತಿದ್ದ ಪೊಲೀಸ್ ಸ್ಟೇಷನ್ಗಳ ಸಂಖ್ಯೆ 2013ರಲ್ಲಿ 330ರಿಂದ 2025ರ ಜೂನ್ನಲ್ಲಿ ಕೇವಲ 52ಕ್ಕೆ ಇಳಿದಿದೆ ಎಂದರು.