ಬೆಂಗಳೂರು, ಮಾ. 31 (DaijiworldNews/AA): ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನೆಲೆ ರಾಜ್ಯದಲ್ಲಿ ವಿದ್ಯುತ್ ಬಳಕೆ ಪ್ರಮಾಣ ಶೇ.10 ರಷ್ಟು ಏರಿಕೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರ ಜನರಿಗೆ ಉಜ್ವಲ ಯೋಜನೆ ಬದಲಾಗಿ ಸೌದೆ ಒಲೆ ಯೋಜನೆ ನೀಡಿದೆ. ಇನ್ನು ಕಳೆದ 15 ದಿನಗಳಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ ಪ್ರಮಾಣ ಶೇಕಡಾ 10 ರಷ್ಟು ಏರಿಕೆಯಾಗಿದೆ ಎಂದರು.
900 ಔಷಧಗಳ ದರ ಏರಿಕೆ ಜೊತೆಗೆ ಸಿಮೆಂಟ್ ಬೆಲೆಯೂ 50 ರಿಂದ 100 ರೂಪಾಯಿಗೆ ಹೆಚ್ಚಳವಾಗಿದೆ ಎಂದು ದೂರಿದ ಅವರು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೇಂದ್ರ ಸರ್ಕಾರ 900 ಕೋಟಿ ರೂಪಾಯಿ ಟೋಲ್ ವಸೂಲಿ ಮಾಡಿದೆ. ಅದೇ ಹಣವನ್ನು ರಾಜ್ಯಕ್ಕೆ ನೀಡಿದರೆ, ಗ್ರಾಮೀಣ ಭಾಗದ ರಸ್ತೆಗಳನ್ನು ಸರ್ಕಾರ ಅಭಿವೃದ್ಧಿ ಮಾಡಬಹುದು ಎಂದು ಹೇಳಿದರು.