ಗುವಾಹಟಿ, ಮಾ. 22 (DaijiworldNews/AA): ಅಸ್ಸಾಂನಲ್ಲಿ ನಿಷೇಧಿತ ಉಲ್ಫಾ (ಐ) ಸಂಘಟನೆ ಉಗ್ರರು ಭಾನುವಾರ ಮುಂಜಾನೆ ಅಸ್ಸಾಂ-ಅರುಣಾಚಲ ಗಡಿಯ ಬಳಿಯ ಜಗುನ್ನಲ್ಲಿರುವ ಪೊಲೀಸ್ ಕಮಾಂಡೋ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಪೊಲೀಸ್ ಶಿಬಿರದ ಮೇಲೆ ಗ್ರೆನೇಡ್ ಮತ್ತು ಆರ್ಪಿಜಿ ಬಳಸಿ ಭಾನುವಾರ ಮುಂಜಾನೆ 2 ಗಂಟೆಯ ಸುಮಾರಿಗೆ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರ ದಾಳಿ ಬೆನ್ನಲ್ಲೇ ಅಸ್ಸಾಂ ಪೊಲೀಸರು ಕೂಡ ಪ್ರತಿದಾಳಿ ನಡೆಸಿದ್ದಾರೆ. ಸುಮಾರು 30 ನಿಮಿಷಗಳು ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಅಸ್ಸಾಂ ಪೊಲೀಸರು ಗಾಯಗೊಂಡಿದ್ದಾರೆ. ಗುಂಡಿನ ದಾಳಿಯ ಬೆನ್ನಲ್ಲೇ ಉಲ್ಫಾ (ಐ) ಬಣದ ಉಗ್ರರು ಕಾಡಿನತ್ತ ಪರಾರಿಯಾಗಿದ್ದಾರೆ.
ಗಾಯಾಳು ಪೊಲೀಸರನ್ನು ದಿಬ್ರುಗಢದ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು ತಿನ್ಸುಕಿಯಾದ ಜಗುನ್ನಲ್ಲಿರುವ ಪೊಲೀಸ್ ಶಿಬಿರಕ್ಕೆ ನಿಯೋಜಿಸಲಾಗಿತ್ತು. ಪೊಲೀಸ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.
ದಾಳಿಯ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಹಾಗೂ ಪೊಲೀಸರು ಉಗ್ರರಿಗಾಗಿ ಅಸ್ಸಾಂ-ಅರುಣಾಚಲ ಗಡಿ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಈ ಮಧ್ಯೆ, ಜಗುನ್ನಲ್ಲಿರುವ ಅಸ್ಸಾಂ ಪೊಲೀಸ್ ಕಮಾಂಡೋ ಶಿಬಿರದ ಮೇಲೆ ನಡೆದ ದಾಳಿಯ ಹೊಣೆಯನ್ನು ಉಲ್ಫಾ(ಐ) ಸಂಘಟನೆ ಹೊತ್ತುಕೊಂಡಿದೆ.