ಬೆಂಗಳೂರು, ಮಾ. 22 (DaijiworldNews/AA): ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ 50 ಕೆಜಿ ಚಿನ್ನ ಸಾಗಣೆಗೆ ಉಗಾಂಡ ಮೂಲದ ಏಜೆಂಟ್ ಜೊತೆ ಆಕೆ ಸಂಪರ್ಕದಲ್ಲಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಸುಮಾರು 102.55 ಕೋಟಿ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಬುಧವಾರ ನ್ಯಾಯಾಲಯಕ್ಕೆ ಸುದೀರ್ಘ ಚಾರ್ಜ್ಶೀಟ್ ಸಲ್ಲಿಸಿದೆ. ಇದರಲ್ಲಿ ಉಗಾಂಡಾ ಮೂಲದ ಏಜೆಂಟರೊಂದಿಗೆ ರನ್ಯಾ ರಾವ್ ನಡೆಸಿದ್ದ ವ್ಯವಹಾರದ ಬಗ್ಗೆ ಮಾಹಿತಿ ದೊರೆತಿದೆ.
ರನ್ಯಾ ರಾವ್ ಕೇವಲ ದುಬೈನಿಂದ ಮಾತ್ರವಲ್ಲದೆ, ಆಫ್ರಿಕನ್ ರಾಷ್ಟ್ರಗಳಿಂದಲೂ ಚಿನ್ನ ಪಡೆಯಲು ಸಂಚು ರೂಪಿಸಿದ್ದರು. ಇದಕ್ಕಾಗಿ ಅವರು ಉಗಾಂಡಾ ಮೂಲದ ಏಜೆಂಟ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಆರಂಭದಲ್ಲಿ 5 ಕೆಜಿ ಚಿನ್ನವನ್ನು ಪ್ರಾಯೋಗಿಕವಾಗಿ ಸಾಗಿಸಲು ಯತ್ನಿಸಿದ್ದ ಈ ತಂಡ, ನಂತರ ಬರೋಬ್ಬರಿ 50 ಕೆಜಿ ಚಿನ್ನದ ಸಾಗಣೆಗೆ ಉಗಾಂಡಾ ಏಜೆಂಟ್ ಜೊತೆ ಡೀಲಿಂಗ್ ಮಾಡಿಕೊಂಡಿತ್ತು. ಇದಕ್ಕಾಗಿ ದುಬೈನಲ್ಲಿ 'ವೀರಾ ಡೈಮಂಡ್ಸ್ ಟ್ರೇಡಿಂಗ್' ಎಂಬ ಹೆಸರಿನ ಕಂಪನಿಯನ್ನು ಕೂಡ ತೆರೆಯಲಾಗಿತ್ತು ಎಂದು ತನಿಖಾ ವರದಿ ತಿಳಿಸಿದೆ.
ಚಿನ್ನ ಖರೀದಿಗಾಗಿ ಮುಂಗಡವಾಗಿ 33 ಲಕ್ಷ ರೂ. ಪಾವತಿಸಲಾಗಿತ್ತು. ಜನವರಿ 2024ರಲ್ಲಿ ರಾಜು ಎಂಬಾತ ಚಿನ್ನ ತರಲು ಉಗಾಂಡಾದ ಕಂಪಾಲಕ್ಕೆ ತೆರಳಿದ್ದಾಗ, ಏಜೆಂಟ್ ಹೆಚ್ಚುವರಿಯಾಗಿ 1.7 ಕೋಟಿ ರೂ. ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ರನ್ಯಾ ರಾವ್ ದುಬೈ ಮೂಲದ ವ್ಯಕ್ತಿಯ ಮೂಲಕ ಈ ಹಣ ನೀಡುವುದಾಗಿ ಒಪ್ಪಿಕೊಂಡಿದ್ದರೂ, ಕೊನೆಗೆ ತಾವು ವಂಚನೆಗೆ ಒಳಗಾಗಿದ್ದೇವೆ ಎಂದು ತಿಳಿದು ಅಲ್ಲಿನ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು ಎಂಬ ಅಂಶ ತನಿಖೆ ವೇಳೆ ತಿಳಿದುಬಂದಿದೆ.