ಬೆಂಗಳೂರು, ಮಾ. 22 (DaijiworldNews/AA): ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಗೆ ಒಮ್ಮತದಿಂದ ಅಭ್ಯರ್ಥಿ ಆಯ್ಕೆ ಆಗಿದೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ನಿಂದ ಅಭ್ಯರ್ಥಿ ಘೋಷಣೆಯಾದ ಬಳಿಕ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಿ ಮಾತನಾಡಿದ ಅವರು, "ಬಾಗಲಕೋಟೆ ವಿಧಾನಸಭೆ ಟಿಕೆಟ್ ಅನ್ನು ಹೆಚ್.ವೈ ಮೇಟಿ ಅವರ 2ನೇ ಮಗ ಉಮೇಶ್ ಮೇಟಿ ಅವರಿಗೆ ಹಾಗೂ ದಾವಣಗೆರೆ ದಕ್ಷಿಣ ಟಿಕೆಟ್ ಅನ್ನು ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ ಅವರಿಗೆ ನೀಡಲಾಗಿದೆ" ಎಂದು ಮಾಹಿತಿ ನೀಡಿದರು.
"ನಾನು, ಮುಖ್ಯಮಂತ್ರಿಯವರು ಹಾಗೂ ಜಮೀರ್ ಅಹಮದ್, ನಾಸಿರ್ ಹುಸೇನ್, ಸಲೀಂ ಅಹ್ಮದ್, ಹ್ಯಾರಿಸ್, ಜಬ್ಬಾರ್ ಅವರು ಎಲ್ಲ ಅಲ್ಪಸಂಖ್ಯಾತ ನಾಯಕರು, ಎಐಸಿಸಿ ಕಾರ್ಯದರ್ಶಿಗಳ ಜೊತೆ ಮಾತನಾಡಿ ಒಮ್ಮತದ ತೀರ್ಮಾನಕ್ಕೆ ಬಂದು ಶಾಮನೂರು ಅವರ ಕುಟುಂಬಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಗ್ಗಟ್ಟಿನಿಂದ ಉಪ ಚುನಾವಣೆ ಮಾಡಿ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುವ ತೀರ್ಮಾನ ಮಾಡಲಾಗಿದೆ" ಎಂದರು.
"ಮಗನ ಬಿ ಫಾರಂ ಅನ್ನು ತಂದೆಯವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರ ಕೈಯಲ್ಲಿ ಕೊಡಲಾಗಿದೆ. ಸೋಮವಾರ ದಾವಣಗೆರೆ ಹಾಗೂ ಬಾಗಲಕೋಟೆಗೆ ನಾನು ಹಾಗೂ ಮುಖ್ಯಮಂತ್ರಿಯವರು ತೆರಲಿ ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಭಾಗವಹಿಸುತ್ತೇವೆ. ಟಿಕೆಟ್ ವಿಚಾರವಾಗಿ ಮಾಧ್ಯಮಗಳು ಮಾಡುತ್ತಿದ್ದ ವಿಭಿನ್ನ ಚರ್ಚೆಗಳಿಗೆ ತೆರೆ ಎಳೆಯಲಾಗಿದೆ. ಹೈಕಮಾಂಡ್ ಟಿಕೆಟ್ ಹಂಚಿಕೆ ಬಗ್ಗೆ ತಡರಾತ್ರಿ ತಿಳಿಸಿತು" ಎಂದು ಹೇಳಿದರು.