ಶಿಮ್ಲಾ, ಮಾ. 22 (DaijiworldNews/TA): ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಹಲವು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ಮಂಡಿ ಜಿಲ್ಲೆಯ ಕೊಟ್ಲಿ ವಿಲೇಜ್ ಹಳ್ಳಿಯಲ್ಲಿ ಭೂಕುಸಿತ ಸಂಭವಿಸಿ, ಬಂಡೆ ಮತ್ತು ಮಣ್ಣು ರಸ್ತೆ ಮಧ್ಯೆ ಬಿದ್ದಿರುವುದರಿಂದ ಸಂಚಾರದಲ್ಲಿ ತೀವ್ರ ಅಡಚಣೆ ಉಂಟಾಗಿದೆ.

ಇದರ ಹಿಂದಿನ ಘಟನೆಗಳಲ್ಲಿ, ಕುಲ್ಲುವಿನ ಪಾರ್ವತಿ ಕಣಿವೆಯಲ್ಲಿ ಘಾಟಿಗಢ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ, ಮಣಿಕರಣ್-ಬರ್ಶೈನಿ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಜೊತೆಗೆ, ಜಚ್ನಿಯಲ್ಲಿ ಮಣ್ಣು ಕುಸಿದ ಕಾರಣ ಭುಂತರ್-ಮಣಿಕರಣ್ ರಸ್ತೆಯಲ್ಲಿ ಕೂಡ ಸಂಚಾರಕ್ಕೆ ಅಡಚಣೆ ಉಂಟಾಗಿ, ಸಂಪರ್ಕ ರಸ್ತೆ ಎರಡೂ ಬದಿಗಳಲ್ಲಿಯೂ ದಟ್ಟಣೆ ಉಂಟಾಗಿತ್ತು.
ಇದೀಗ ಮಂಡಿ ಜಿಲ್ಲೆಯ ಕೋಟ್ಲಿ ಹಳ್ಳಿಯ ಪ್ರದೇಶದಲ್ಲೂ ಇದೇ ರೀತಿಯ ತೊಂದರೆ ನಿರ್ಮಾಣವಾಗಿದೆ. ಗುಡ್ಡಗಾಡು ಪ್ರದೇಶದ ಮಧ್ಯದ ರಸ್ತೆಯ ಮೂಲಕ ಸಾಗುವ ವಾಹನಗಳಿಗೆ ಪೊಲೀಸ್ ಮತ್ತು ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಭೂಕುಸಿತದ ಪ್ರದೇಶಗಳಲ್ಲಿ ತಕ್ಷಣ ಪರಿಸ್ಥಿತಿ ಪರಿಶೀಲನೆ ಮತ್ತು ರಸ್ತೆ ತೆರವು ಕಾರ್ಯ ಕೈಗೊಳ್ಳಲಾಗುತ್ತಿದೆ.