ಬೆಂಗಳೂರು, ಮಾ. 22 (DaijiworldNews/TA): ನಗರದ ಹೃದಯ ಭಾಗವಾದ ಅನಿಲ್ ಕುಂಬ್ಳೆ ಸರ್ಕಲ್ನಲ್ಲಿ ನಡೆದ ಅಪಾಯಕಾರಿಯಾದ ಕಾರು ಡ್ರಿಫ್ಟಿಂಗ್ ಪ್ರಕರಣವು ಸಂಚಲನ ಮೂಡಿಸಿದೆ. ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ಡ್ರಿಫ್ಟಿಂಗ್ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಲ್ಯಾಂಬೊರ್ಗಿನಿ ಐಷಾರಾಮಿ ಕಾರನ್ನು ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ, ಮಧ್ಯ ರಸ್ತೆಯಲ್ಲೇ ಲ್ಯಾಂಬೊರ್ಗಿನಿ ಕಾರು ಹಲವು ಬಾರಿ ಡ್ರಿಫ್ಟಿಂಗ್ ಮಾಡುತ್ತಿರುವುದು ಕಾಣಿಸಿಕೊಂಡಿತ್ತು. ವಾಹನ ಸಂಚಾರ ಹೆಚ್ಚಿರುವ ಪ್ರದೇಶದಲ್ಲಿ ಈ ರೀತಿಯ ಸಾಹಸ ಪ್ರದರ್ಶನವು ಸಾರ್ವಜನಿಕರ ಜೀವಕ್ಕೆ ಅಪಾಯಕಾರಿಯಾಗಬಹುದು ಎಂಬ ಕಾರಣದಿಂದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಕಾರು ರಿಕ್ಕಿ ರೈ ಅವರಿಗೆ ಸೇರಿದ್ದು ಎಂಬ ಶಂಕೆ ವ್ಯಕ್ತವಾಗಿದೆ. ಅವರು ಖ್ಯಾತ ಡಾನ್ ಮುತ್ತಪ್ಪ ರೈ ಅವರ ಪುತ್ರರಾಗಿದ್ದಾರೆ. ಡ್ರಿಫ್ಟಿಂಗ್ ನಡೆಸಿದ ವ್ಯಕ್ತಿ ರಿಕ್ಕಿ ರೈ ಅವರೇನಾ ಎಂಬುದನ್ನು ಖಚಿತಪಡಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ರಿಕ್ಕಿ ರೈ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಘಟನೆ ನಡೆದ ಸಮಯದಲ್ಲಿ ಕಾರನ್ನು ಯಾರು ಚಲಾಯಿಸುತ್ತಿದ್ದರು ಎಂಬುದರ ಕುರಿತು ಸ್ಪಷ್ಟನೆ ಕೇಳಲಾಗಿದೆ.
ತನಿಖೆ ಹಿನ್ನಲೆ ಕೆಎ05 NR 0009 ನೋಂದಣಿ ಸಂಖ್ಯೆಯ ಲ್ಯಾಂಬೊರ್ಗಿನಿ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕಾರಿನ ನೋಂದಣಿ ಮತ್ತು ಮಾಲೀಕತ್ವದ ವಿವರಗಳನ್ನು ಖಚಿತಪಡಿಸಿಕೊಳ್ಳಲು ಆರ್ಟಿಒಗೆ ಪತ್ರ ಬರೆದಿದ್ದಾರೆ. ಕಾರು ನಿಜವಾಗಿ ಯಾರ ಹೆಸರಿನಲ್ಲಿ ಇದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಅನಿಲ್ ಕುಂಬ್ಳೆ ಸರ್ಕಲ್ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಕಾರು ಎರಡು ರಿಂದ ಮೂರು ಬಾರಿ ಡ್ರಿಫ್ಟಿಂಗ್ ಮಾಡಿರುವುದು ದೃಶ್ಯಗಳಲ್ಲಿ ಪತ್ತೆಯಾಗಿದೆ.
ಈ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಸಂಚಾರ ಠಾಣೆಯ ಇನ್ಸ್ಪೆಕ್ಟರ್ ರವಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಸಾರ್ವಜನಿಕ ಸುರಕ್ಷತೆಯನ್ನು ಹಾನಿಗೊಳಿಸುವ ಇಂತಹ ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಾರ್ವಜನಿಕರಿಗೆ ರಸ್ತೆ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದು, ಸಾಹಸ ಪ್ರದರ್ಶನಗಳಿಗಾಗಿ ಸಾರ್ವಜನಿಕ ರಸ್ತೆಯನ್ನು ಬಳಸುವುದು ಕಾನೂನುಬಾಹಿರ ಹಾಗೂ ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದ್ದಾರೆ.