ನವದೆಹಲಿ, ಮಾ. 20 (DaijiworldNews/AK): ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ವಿತರಣೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಎಲ್ಪಿಜಿ ಉತ್ಪಾದನೆಯು ಶೇ. 40 ರಷ್ಟು ಹೆಚ್ಚಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶಾದ್ಯಂತದ ಇರುವ ಸಂಸ್ಕರಣಾಗಾರಗಳು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತಮ್ಮ ಅತ್ಯುನ್ನತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಇಲ್ಲಿಯವರೆಗೆ ಸುಮಾರು 11,300 ಟನ್ ಎಲ್ಪಿಜಿಯನ್ನು ಗ್ರಾಹಕರಿಗೆ ಪೂರೈಸಲಾಗಿದೆ. ಪ್ರಮುಖ 15 ಭೌಗೋಳಿಕ ಪ್ರದೇಶಗಳಲ್ಲಿ ಸುಮಾರು 13,700 ಪೈಪ್ಡ್ ನೈಸರ್ಗಿಕ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ. ಆನ್ಲೈನ್ ಎಲ್ಪಿಜಿ ಬುಕ್ಕಿಂಗ್ ಶೇ.93ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಸಿಲಿಂಡರ್ಗಳ ಅಕ್ರಮ ಮಾರಾಟ ತಡೆಯಲು ಮತ್ತು ನ್ಯಾಯಯುತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಗುರುವಾರ ಭಾರತದಾದ್ಯಂತ ಸುಮಾರು 4,500 ದಾಳಿಗಳನ್ನು ನಡೆಸಿದ್ದಾರೆ ಎಂದು ಶರ್ಮಾ ಹೇಳಿದರು.
ಸುಮಾರು 7,500 ಗ್ರಾಹಕರು ಎಲ್ಪಿಜಿಯಿಂದ ಪಿಎನ್ಜಿ ಸಂಪರ್ಕಕ್ಕೆ ಬದಲಾಯಿಸಿಕೊಂಡಿದ್ದಾರೆ. ದೃಢೀಕರಣ ಕೋಡ್ ಮೂಲಕವೇ ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ. ಪ್ಯಾನಿಕ್ ಬುಕಿಂಗ್ ಗಮನಾರ್ಹ ಇಳಿಕೆಯಾಗಿದೆ. ನಿನ್ನೆ ನಮಗೆ ಸುಮಾರು 55 ಲಕ್ಷ ರೀಫಿಲ್ ಬುಕ್ಕಿಂಗ್ ವಿನಂತಿಗಳು ಬಂದಿವೆ. ಎಲ್ಪಿಜಿ ಸಿಲಿಂಡರ್ಗಳ ವಿತರಣೆ ಸಾಮಾನ್ಯ ದಿನದಂತೆ ನಡೆಯುತ್ತಿದೆ ಎಂದು ತಿಳಿಸಿದರು.