ತುಮಕೂರು, ಮಾ. 20 (DaijiworldNews/AA): ಕೋತಿಯೊಂದು ಮಾಡಿದ ಕಿತಾಪತಿಗೆ ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಓರ್ವ ಮೃತಪಟ್ಟು ನಾಲ್ಕೈದು ಜನ ಅಸ್ವಸ್ಥರಾಗಿರುವ ಘಟನೆ ತುಮಕೂರಿನ ಮಾರುತಿ ನಗರದಲ್ಲಿ ನಡೆದಿದೆ.

ಕೋತಿ ಮಾಡಿದ ಕೆಲಸಕ್ಕೆ ಏಕಾಏಕಿ ಹಲವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಈ ಘಟನೆಯಲ್ಲಿ ಕಾರು ಶೋರೂಂ ಮೇಲ್ವಿಚಾರಕರಾಗಿದ್ದ ವಿಜಯ್ ಪ್ರಕಾಶ್(65) ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.
ಮಾರುತಿ ನಗರದ ಪಿಎನ್ ಟಿ ಕ್ವಾಟ್ರಸ್ ಬಳಿ ಮರದಲ್ಲಿದ್ದ ಹೆಜ್ಜೇನು ಅಲ್ಲಿದ್ದ ಹಲವರ ಮೇಲೆ ದಾಳಿ ನಡೆಸಿದೆ. ಈ ವೇಳೆ ಕೆಲಸ ಮುಗಿಸಿ ಬೈಕ್ನಲ್ಲಿ ಬರುತ್ತಿದ್ದ ವಿಜಯ್ ಪ್ರಕಾಶ್ ಅವರ ಮೇಲೂ ದಾಳಿ ನಡೆಸಿವೆ. ಈ ವೇಳೆ ಶರ್ಟ್ ಬಿಚ್ಚಿ ಅವನ್ನು ಓಡಿಸಲು ಪ್ರಯತ್ನ ಮಾಡಿದ್ದರು. ಆದರೆ ಐವತ್ತಕ್ಕೂ ಅಧಿಕ ಜೇನು ನೊಣಗಳು ಅವರ ಮುಖ ಸೇರದಂತೆ ದೇಹದ ಹಲವು ಭಾಗಗಳ ಮೇಲೆ ದಾಳಿ ನಡೆಸಿದ್ದವು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಕೊನೆಯುಸಿರೆಳೆದಿದ್ದಾರೆ.