ಬೆಂಗಳೂರು, ಮಾ. 19 (DaijiworldNews/AA): ರಾಜ್ಯಕ್ಕೆ ಸೂಕ್ತ ರೀತಿಯಲ್ಲಿ ವಾಣಿಜ್ಯ ಹಾಗೂ ಆಟೋ ಎಲ್ಪಿಜಿ ಹಂಚಿಕೆಗೆ ಸಂಬಂಧಿಸಿದಂತೆ ಮಧ್ಯ ಪ್ರವೇಶಿಸುವಂತೆ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಸಚಿವಾಲಯದ ನಿರ್ದೇಶನದಂತೆ ಗೃಹ ಬಳಕೆ ಗ್ರಾಹಕರಿಗೆ ಎಲ್ ಪಿಜಿ ಪೂರೈಕೆಗೆ ಆದ್ಯತೆ ನೀಡಿರುವುದರಿಂದ ವಾಣಿಜ್ಯ ಎಲ್ಪಿಜಿ ಸಿಗದಂತಾಗಿದೆ. ರೆಸ್ಟೋರೆಂಟ್, ಹೋಟೆಲ್, ಪಿಜಿ ಮತ್ತಿತರರಿಂದ 50,000 ಎಲ್ ಪಿಜಿ ಸಿಲಿಂಡರ್ ಗೆ ಬೇಡಿಕೆಯಿದ್ದು, ಪ್ರತಿದಿನ ಕೇವಲ 1,000 ಸಿಲಿಂಡರ್ ಗಳನ್ನು ಮಾತ್ರ ಪೂರೈಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ವಾಣಿಜ್ಯ ಸಿಲಿಂಡರ್ ಅಭಾವದಿಂದ ಹೋಟೆಲ್ ಗಳ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಆತಿಥ್ಯ ವಲಯದ ಮೇಲೆ ಅವಲಂಬಿತರಾಗಿರುವ ವಿದ್ಯಾರ್ಥಿಗಳು, ಐಟಿ ವೃತ್ತಿಪರರು, ರೈತರು, ಹಾಲಿನ ಉತ್ಪಾದಕರು ಸೇರಿದಂತೆ ಅಪಾರ ಪ್ರಮಾಣದ ಸಾರ್ವಜನಿಕರ ಮೇಲೆ ಪರಿಣಾಮ ಉಂಟಾಗಿದೆ ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದೇ ರೀತಿಯಲ್ಲಿ ಆಟೋ ಎಲ್ ಪಿಜಿ ಕೊರತೆಯು ಬೆಂಗಳೂರಿನಂತಹ ನಗರಗಳಲ್ಲಿ ಆಟೋ ರಿಕ್ಷಾ ಮೂಲಕ ಬದುಕು ಕಟ್ಟಿಕೊಂಡಿರುವ ಅಪಾರ ಸಂಖ್ಯೆಯ ಆಟೋ ಚಾಲಕರ ಮೇಲೆ ಪರಿಣಾಮ ಬೀರಿದೆ. ಭಾರತಕ್ಕೆ 2 ಅನಿಲ ಟ್ಯಾಂಕರ್ ಬಂದಿರುವ ಬಗ್ಗೆ ಮಾಹಿತಿಯಿದ್ದು, ಕರ್ನಾಟಕಕ್ಕೆ ವಿಶೇಷವಾಗಿ ಬೆಂಗಳೂರು ನಗರವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಹಾಗೂ ಸಮರ್ಪಕ ರೀತಿಯಲ್ಲಿ ವಾಣಿಜ್ಯ ಹಾಗೂ ಆಟೋ ಎಲ್ಪಿಜಿ ಒದಗಿಸಲು ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಸಚಿವರ ಬಳಿ ಮನವಿ ಮಾಡಿದ್ದಾರೆ.