ನವದೆಹಲಿ, ಮಾ. 19 (DaijiworldNews/AA): ಸೌರಶಕ್ತಿ, ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ನಿಂತಿದ್ದು, ಊಹಿಸಲು ಅಸಾಧ್ಯ ಎನ್ನುವಂತೆ ಅಗಾಧ ಸಾಧನೆಗೈದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

ಸಂವಾದವೊಂದರಲ್ಲಿ ಮಾತನಾಡಿದ ಅವರು, "2030ರ ವೇಳೆಗೆ 500 GW ನವೀಕರಿಸಬಹುದಾದ ಇಂಧನ ಗುರಿಯತ್ತ ಸಾಗಿರುವ ಭಾರತದ ಶುದ್ಧ ಇಂಧನ ಪ್ರಯಾಣ ಅಭೂತಪೂರ್ವ ವೇಗ ಪಡೆಯುತ್ತಿದೆ. ಭಾರತದ ಮಾಡ್ಯೂಲ್ ಮತ್ತು ಉತ್ಪಾದನಾ ಸಾಮರ್ಥ್ಯವು ಗಮನಾರ್ಹವಾಗಿ ವಿಸ್ತರಿಸಿದ್ದು, ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ. ವಿತರಿಸಿದ ನವೀಕರಿಸಬಹುದಾದ ಇಂಧನ ಕೇವಲ 35 GW ತಲುಪಿದ್ದು, 55 ಲಕ್ಷ ವಿಕೇಂದ್ರೀಕೃತ ಸ್ಥಾಪನೆಗಳಿಂದ ನಡೆಸಲ್ಪಡುತ್ತದೆ. ಇದರಲ್ಲಿ 31 ಲಕ್ಷ ಮನೆಗಳು ಸೇರಿವೆ" ಎಂದರು.
"ಪಿಎಂ ಸೂರ್ಯಘರ್ ಮತ್ತು ಪಿಎಂ ಕುಸುಮ್ ಅಡಿಯಲ್ಲಿ 23 ಲಕ್ಷ ಸೌರಶಕ್ತಿ ನೀರಾವರಿ ಪಂಪ್ಗಳಾಗಿ ಪರಿವರ್ತನೆಗೊಂಡಿವೆ. ಒಂದು ದಶಕದ ಹಿಂದೆ ಊಹಿಸಲಸಾಧ್ಯ ಎನ್ನುವಂತಿದ್ದ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಪರಿವರ್ತನಾತ್ಮಕ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದರು.
ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯ ಪರ್ಯಾಯ ಇಂಧನ ಉತ್ಪಾದನಾ ಕೇಂದ್ರವಾಗಿ ರೂಪಿತವಾಗುತ್ತಿದೆ. ದಶಕದ ಹಿಂದೆ ದೂರದ ಬೆಟ್ಟದಂತಿದ್ದ ನವೀಕರಿಸಬಹುದಾದ ಇಂಧನ ಪ್ರಯಾಣ ವಾಸ್ತವದಲ್ಲಿ ಸಾಧನೆಯ ಪಥದಲ್ಲಿದೆ" ಎಂದು ನುಡಿದರು.