ನವದೆಹಲಿ, ಮಾ. 18 (DaijiworldNews/T A): ಚೀನಾ ಕಡೆಗೆ ಸಾಗುತ್ತಿದ್ದ ರಷ್ಯಾ ತೈಲ ತುಂಬಿದ ಟ್ಯಾಂಕರ್ ಹಡಗು ಮಧ್ಯದಲ್ಲೇ ದಾರಿ ಬದಲಿಸಿ ಭಾರತದತ್ತ ಬರುತ್ತಿರುವ ಬಗ್ಗೆ ವರದಿಯಾಗಿದೆ. ಈ ಹಡಗು ಈಗ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದೆ.

ಹಡಗು ಟ್ರ್ಯಾಕಿಂಗ್ ಮಾಹಿತಿಯ ಪ್ರಕಾರ, ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರದ ಬಂದರಿನಿಂದ ಯುರಲ್ಸ್ ಕಚ್ಚಾತೈಲವನ್ನು ಆಕ್ವಾ ಟೈಟಾನ್ ಹಡಗಿಗೆ ಲೋಡ್ ಮಾಡಲಾಗಿತ್ತು. ಆರಂಭದಲ್ಲಿ ಚೀನಾದ ರಿಝಾವೊ ಬಂದರು ಗಮ್ಯಸ್ಥಾನವಾಗಿದ್ದ ಈ ಹಡಗು, ಇದೀಗ ಯೂಟರ್ನ್ ಹೊಡೆದು ಮಾರ್ಚ್ 21ರಂದು ನವಮಂಗಳೂರು ಬಂದರಿಗೆ ತಲುಪುವ ಸಾಧ್ಯತೆಯಿದೆ.
ಮಾರ್ಚ್ ಮಧ್ಯಭಾಗದಲ್ಲಿ ಆಗ್ನೇಯ ಏಷ್ಯಾ ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಈ ಹಡಗು ತನ್ನ ಗಮ್ಯಸ್ಥಾನವಾಗಿ ಚೀನಾವನ್ನು ತೋರಿಸುತ್ತಿತ್ತು. ಆದರೆ, ಜಾಗತಿಕ ಪರಿಸ್ಥಿತಿಯ ಬದಲಾವಣೆಯಿಂದ ದಾರಿ ಬದಲಾವಣೆ ನಡೆದಿದೆ ಎಂದು ತಿಳಿದುಬಂದಿದೆ.
ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನತೆಯಿಂದ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗುತ್ತಿರುವ ಹಿನ್ನೆಲೆ, ಭಾರತ ಈ ವಾರವೇ ರಷ್ಯಾದಿಂದ ಸುಮಾರು 30 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ.
ಮಾಹಿತಿ ಪ್ರಕಾರ, ರಷ್ಯಾದ ತೈಲವನ್ನು ಚೀನಾಕ್ಕೆ ಸಾಗಿಸುತ್ತಿದ್ದ ಕನಿಷ್ಠ ಏಳು ಟ್ಯಾಂಕರ್ಗಳು ಮಧ್ಯದಲ್ಲೇ ಗಮ್ಯಸ್ಥಾನವನ್ನು ಬದಲಾಯಿಸಿ ಭಾರತದತ್ತ ಬರುತ್ತಿವೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಈ ಬದಲಾವಣೆಗಳು ಭಾರತದ ಇಂಧನ ಭದ್ರತೆ ಹಾಗೂ ಆಮದು ತಂತ್ರಕ್ಕೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯಿದೆ.