ಬೆಂಗಳೂರು, ಮಾ. 17 (DaijiworldNews/TA) : 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗಳು ಮಾರ್ಚ್ 18 ರಿಂದ ಆರಂಭವಾಗುತ್ತಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶುಭಾಶಯ ಕೋರಿ, ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಲು ಸಲಹೆ ನೀಡಿದರು.

ಈ ವರ್ಷ ಒಟ್ಟು 8,65,968 ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತಂದು, ಪರೀಕ್ಷೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳು ಎರಡನೇ ಅಥವಾ ಮೂರನೇ ಹಂತದಲ್ಲಿ ಪರೀಕ್ಷೆ ಬರೆಯುವ ಅವಕಾಶ ಹೊಂದಿರುವುದರಿಂದ, ಯಾವುದೇ ವಿದ್ಯಾರ್ಥಿ ಆತಂಕಪಡದೆ ಪರೀಕ್ಷೆಗೆ ಹಾಜರಾಗಬಹುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿ, ಈ ಹಿಂದೆ ವಿದ್ಯಾರ್ಥಿಗಳು ಒತ್ತಡದಿಂದ ಪರೀಕ್ಷೆಗೆ ಹಾಜರಾಗುತ್ತಿದ್ದುದಾಗಿ ಉಲ್ಲೇಖಿಸಿದರು. ಈಗ ಜಾರಿಗೆ ಬಂದ ಸುಧಾರಣೆಗಳಿಂದ, ವಿದ್ಯಾರ್ಥಿಗಳು ಮನಶ್ಚಾಂತಿ ಮತ್ತು ತಾಳ್ಮೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕೂಡ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿ, ಪೋಷಕರು ಮಕ್ಕಳಿಗೆ ಮಾನಸಿಕ ಹಿಂಸೆ ನೀಡಬಾರದು ಎಂಬುದಾಗಿ ಮನವಿ ಮಾಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಸುದ್ದಿಗಳು ಹರಡುತ್ತಿವೆ. ಈ ಕುರಿತು ಶಿಕ್ಷಣ ಸಚಿವರು ಸುದ್ದಿಗೋಷ್ಠಿ ನಡೆಸಿ ವಿದ್ಯಾರ್ಥಿಗಳಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.
ಒಟ್ಟಿನಲ್ಲಿ, ಸರ್ಕಾರ ಮತ್ತು ವಿರೋಧ ಪಕ್ಷದ ನಾಯಕರು ವಿದ್ಯಾರ್ಥಿಗಳಿಗೆ ಧೈರ್ಯದಿಂದ ಮತ್ತು ಆತಂಕವಿಲ್ಲದೆ ಪರೀಕ್ಷೆಗೆ ಹಾಜರಾಗಲು ಮನವಿ ಮಾಡಿದ್ದು, ಪರೀಕ್ಷಾ ಪ್ರಕ್ರಿಯೆಯನ್ನು ಸುಗಮವಾಗಿಸಲು ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ.