ಬೆಂಗಳೂರು, ಮಾ. 17 (DaijiworldNews/TA): ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ವಿಚಾರಣೆ ಮುಂದುವರಿದಿರುವ ನಡುವೆ, 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿದೆ. ಪ್ರಕರಣದಲ್ಲಿ ಆರೋಪಿಯಾಗಿರುವ ಪವನ್ (ಎ3) ಪರ ವಕೀಲರು ತನಿಖಾಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರೆ, ಇದೀಗ ನ್ಯಾಯಾಲಯ ಆ ಅರ್ಜಿಯನ್ನು ತಿರಸ್ಕರಿಸಿ ದಂಡ ವಿಧಿಸಿದೆ.

ಹಿಂದಿನ ವಿಚಾರಣೆ ವೇಳೆ ಪವನ್ ಪರ ವಕೀಲರು ತನಿಖಾಧಿಕಾರಿಗಳಲ್ಲಿ ಒಬ್ಬರಾದ ಎಸಿಪಿ ಚಂದನ್ ಅವರನ್ನು ಸಹ ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸಬೇಕು ಎಂದು ವಾದಿಸಿದ್ದರು. ಆರೋಪಿಗಳ ಮೊಬೈಲ್ಗಳನ್ನು ವಶಕ್ಕೆ ಪಡೆಯುವ ವೇಳೆ ಪೊಲೀಸರು ತೆಗೆದ ಫೋಟೋದಲ್ಲಿನ ಟೈಲ್ಸ್ ಬಣ್ಣವನ್ನು ಉಲ್ಲೇಖಿಸಿ, ಸುಳ್ಳು ಸಾಕ್ಷ್ಯ ಸೃಷ್ಟಿ ಹಾಗೂ ಸಾಕ್ಷ್ಯ ತಿದ್ದುಪಡಿ ನಡೆದಿದೆ ಎಂದು ಆರೋಪಿಸಿದ್ದರು.
ಆದರೆ ನ್ಯಾಯಾಲಯ ಈ ವಾದವನ್ನು ತಳ್ಳಿಹಾಕಿದ್ದು, ಆಧಾರರಹಿತ ಅರ್ಜಿ ಸಲ್ಲಿಸಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಲಾಗಿದೆ ಎಂದು ಹೇಳಿ ಪವನ್ ಪರ ವಕೀಲರಿಗೆ ರೂ. 5,000 ದಂಡ ವಿಧಿಸಿದೆ. ಈ ಮೊತ್ತವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಜಮಾ ಮಾಡುವಂತೆ ಸೂಚನೆ ನೀಡಲಾಗಿದೆ.
ಇನ್ನೊಂದೆಡೆ, ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬರಾದ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಗೆ ನ್ಯಾಯಾಲಯ ಸಮ್ಮತಿ ನೀಡಿದೆ. ಜೈಲಿನಲ್ಲಿ ಇರುವ ವೇಳೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಕೋರ್ಟ್ ಆದೇಶಿಸಿದೆ. ಜೈಲು ನಿಯಮಾವಳಿಗಳ ಪ್ರಕಾರವೇ ಈ ಭೇಟಿಗೆ ಅವಕಾಶ ಕಲ್ಪಿಸಬೇಕೆಂದು ಜೈಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೆಲೆಬ್ರಿಟಿ ಎಂಬ ಕಾರಣಕ್ಕೆ ವಿಧಿಸಲಾಗಿದ್ದ ಕೆಲವು ನಿರ್ಬಂಧಗಳ ನಡುವೆ, ಇದೀಗ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿರುವುದು ಗಮನಾರ್ಹವಾಗಿದೆ.
ಈ ನಡುವೆ, ಪ್ರಕರಣ ನಡೆದಿದ್ದು ಸುಮಾರು ಎರಡು ವರ್ಷಗಳಾಗುತ್ತಿದ್ದು, ದರ್ಶನ್ ಸೇರಿದಂತೆ ಪವಿತ್ರ ಗೌಡ ಮತ್ತು ಇತರ ಆರೋಪಿಗಳು ಬಂಧನಕ್ಕೊಳಗಾಗಿದ್ಧಾರೆ. ದರ್ಶನ್ ಜಾಮೀನು ಪಡೆದು ಹೊರಬಂದಿದ್ದರೂ, ಬಳಿಕ ಸುಪ್ರೀಂಕೋರ್ಟ್ ಮತ್ತೆ ನ್ಯಾಯಾಂಗ ಬಂಧನ ವಿಧಿಸಿದೆ.
ದರ್ಶನ್ ಪರ ವಕೀಲರು ಇನ್ನೂ ಜಾಮೀನು ಅರ್ಜಿ ಸಲ್ಲಿಸದಿದ್ದರೂ, ವಿಚಾರಣೆಯನ್ನು ಶೀಘ್ರಗತಿಯಲ್ಲಿ ನಡೆಸುವಂತೆ ಮನವಿ ಮಾಡಿದ್ದಾರೆ. ಆದರೆ ವಿಶೇಷ ಸರ್ಕಾರಿ ಅಭಿಯೋಜಕರು ತ್ವರಿತ ವಿಚಾರಣೆಗೆ ಒಪ್ಪದ ಹಿನ್ನೆಲೆಯಲ್ಲಿ, ಪ್ರಕರಣದ ಮುಂದಿನ ಹಂತದ ವಿಚಾರಣೆ ಹೇಗೆ ಸಾಗುತ್ತದೆ ಎಂಬುದು ಕಾದು ನೋಡಬೇಕಾಗಿದೆ.