ಬೆಂಗಳೂರು, ಮಾ. 17 (DaijiworldNews/TA): ದಶಕಗಳ ಕಾಲ ರಾಕ್ ಸಂಗೀತ ಮತ್ತು ಅಮೇರಿಕನ್ ಶೈಲಿಯ ಆಹಾರಕ್ಕಾಗಿ ಪ್ರಸಿದ್ಧಿಯಾಗಿದ್ದ ಹಾರ್ಡ್ ರಾಕ್ ಕೆಫೆ ಇದೀಗ ಭಾರತಕ್ಕೆ ವಿದಾಯ ಹೇಳುತ್ತಿದೆ. ದೇಶದಲ್ಲಿ ಈ ಕೆಫೆಗಳನ್ನು ನಡೆಸುತ್ತಿದ್ದ ಜೆ.ಎಸ್.ಎಮ್. ಕರ್ಪೋರೆಷನ್ ಪ್ರೈವೆಟ್ ಲಿಮಿಟೆಡ್ ಜೊತೆಗೆಗಿನ ಒಪ್ಪಂದವನ್ನು ಹಾರ್ಡ್ ರಾಕ್ ಇಂಟರ್ನ್ಯಾಷನಲ್ ಅಧಿಕೃತವಾಗಿ ರದ್ದುಗೊಳಿಸಿದೆ.

ಈ ನಿರ್ಧಾರದಿಂದಾಗಿ ಭಾರತದ ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಮಾರು 10 ಕೆಫೆಗಳು ಮುಚ್ಚಲಿವೆ. ಅದರಲ್ಲೂ ಬೆಂಗಳೂರಿನ ಸೇಂಟ್ ಮಾರ್ಕ್ಸ್ ರೋಡ್ನ ಐಕಾನಿಕ್ ಔಟ್ಲೆಟ್ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ಶಾಖೆ ಸೇರಿದಂತೆ ಹಲವು ಸ್ಥಳಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಲಿವೆ. ಇದೇ ರೀತಿ ಚಂಡೀಗಢ, ಚೆನ್ನೈ, ಹೈದರಾಬಾದ್ (ಹೈಟೆಕ್ ಸಿಟಿ ಸೇರಿದಂತೆ), ಕೋಲ್ಕತ್ತಾ, ನವದೆಹಲಿ ಮತ್ತು ಪುಣೆ ನಗರಗಳಲ್ಲಿಯೂ ಈ ಪ್ರಸಿದ್ಧ ಕೆಫೆಗಳು ಮುಚ್ಚುವಂತಾಗಿದೆ.
ಆದರೆ ಗೋವಾದಲ್ಲಿರುವ ಹಾರ್ಡ್ ರಾಕ್ ಹೋಟೆಲ್ ಗೋವಾ ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಇದು ಪ್ರಸ್ತುತ ರದ್ದಾದ ಒಪ್ಪಂದದ ವ್ಯಾಪ್ತಿಗೆ ಒಳಪಡುವುದಿಲ್ಲ.
ಈ ಸುದ್ದಿ ಹೊರಬಿದ್ದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವರು ಈ ಕೆಫೆಯೊಂದಿಗೆ ಸಂಬಂಧಿಸಿದ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದರೆ, ಇನ್ನೂ ಕೆಲವರು ಅದರ ವೈಫಲ್ಯಕ್ಕೆ ಕಾರಣಗಳನ್ನು ವಿಶ್ಲೇಷಿಸಿದ್ದಾರೆ. “ಹಾರ್ಡ್ ರಾಕ್ ಕೆಫೆ ಉತ್ತಮವಾಗಿತ್ತು, ಆದರೆ ಬೆಲೆಗಳು ತುಂಬಾ ಹೆಚ್ಚು. ಅದೇ ರೀತಿಯ ಅನುಭವವನ್ನು ಕಡಿಮೆ ಬೆಲೆಗೆ ಸ್ಥಳೀಯ ಪಬ್ಗಳು ನೀಡುತ್ತಿವೆ” ಎಂದು ಒಬ್ಬ ನೆಟ್ಟಿಗ ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಕೆಲ ಸಂಗೀತ ಪ್ರಿಯರು, “ಇದು ಕೇವಲ ಊಟದ ಜಾಗವಲ್ಲ, ಸಂಗೀತದ ಅನುಭವ ನೀಡುವ ತಾಣವಾಗಿತ್ತು. ಆದರೆ ಇತ್ತೀಚೆಗೆ ರಾಕ್ ಸಂಗೀತದ ಬದಲು ಸಾಮಾನ್ಯ ಪ್ಲೇಲಿಸ್ಟ್ಗಳು ಕೇಳಿಬರುತ್ತಿದ್ದವು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಸೇಂಟ್ ಮಾರ್ಕ್ಸ್ ರೋಡ್ ಕೆಫೆಯನ್ನು ನಗರದ ಸಾಂಸ್ಕೃತಿಕ ಸಂಕೇತವೆಂದು ಪರಿಗಣಿಸಿದ್ದವರು, ಈ ನಿರ್ಧಾರದಿಂದ ನಿರಾಶರಾಗಿದ್ದಾರೆ.
1971ರಲ್ಲಿ ಐಸಾಕ್ ಟೈಗ್ರೆಟ್ ಮತ್ತು ಪೀಟರ್ ಮಾರ್ಟನ್ ಅವರು ಲಂಡನ್ನಲ್ಲಿ ಈ ಕೆಫೆಯನ್ನು ಸ್ಥಾಪಿಸಿದ್ದರು. ಅಮೇರಿಕನ್ ಶೈಲಿಯ ಆಹಾರ ಮತ್ತು ರಾಕ್ ಸಂಗೀತದ ಸ್ಮರಣಿಕೆಗಳೊಂದಿಗೆ ವಿಶಿಷ್ಟ ಅನುಭವ ನೀಡುವುದು ಇದರ ವಿಶೇಷವಾಗಿತ್ತು. ಇಂದಿಗೆ 70ಕ್ಕೂ ಹೆಚ್ಚು ದೇಶಗಳಲ್ಲಿ ಹೋಟೆಲ್, ಕ್ಯಾಸಿನೊ ಮತ್ತು ಮ್ಯೂಸಿಯಂಗಳನ್ನು ಹೊಂದಿರುವ ಈ ಬ್ರ್ಯಾಂಡ್, ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿದೆ.
ಒಟ್ಟಿನಲ್ಲಿ, ಬೆಂಗಳೂರಿನಂತಹ ನಗರಗಳಲ್ಲಿ ಸಾಂಸ್ಕೃತಿಕ ಮತ್ತು ಸಂಗೀತದ ನೆನಪುಗಳನ್ನು ಕಟ್ಟಿಕೊಟ್ಟ ಈ ಐಕಾನಿಕ್ ಕೆಫೆಯ ನಿರ್ಗಮನ, ನಗರಪ್ರಿಯರಿಗೆ ಖಂಡಿತವಾಗಿಯೂ ಒಂದು ಯುಗದ ಅಂತ್ಯವನ್ನೇ ಸೂಚಿಸುತ್ತದೆ.