ಬೆಂಗಳೂರು, ಮಾ. 17 (DaijiworldNews/TA): ರಾಜ್ಯದಲ್ಲಿ ಕಳೆದ 6 ತಿಂಗಳಲ್ಲಿ ಬಾಯಿ, ಗರ್ಭಕಂಠ, ಸ್ತನ ಕ್ಯಾನ್ಸರ್ಗಳಿಗೆ 45153 ಮಂದಿ ತುತ್ತಾಗಿರುವ ಶಂಕೆ (ಸಸ್ಪೆಕ್ಟೆಡ್ ಕೇಸ್) ಇದ್ದು, ಈ ಪೈಕಿ 8894 ಜನರಲ್ಲಿ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಇವರಲ್ಲಿ 8045 ಮಂದಿ ಚಿಕಿತ್ಸೆಗೆ ಒಳಗಾಗಿದ್ದಾರೆ.

ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗೃಹ ಆರೋಗ್ಯ ಯೋಜನೆಯಡಿ ಕಳೆದ 6 ತಿಂಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ, ಮನೆಗೆ ತೆರಳಿ 88.84 ಲಕ್ಷ ಜನರಿಗೆ ಕ್ಯಾನ್ಸರ್ ತಪಾಸಣೆ ನಡೆಸಿದ್ದಾರೆ. 52 ಲಕ್ಷ ಜನರಿಗೆ ಬಾಯಿ ಕ್ಯಾನ್ಸರ್ ತಪಾಸಣೆ ನಡೆಸಿದಾಗ, 21157 ಮಂದಿಯಲ್ಲಿ ಇದರ ಲಕ್ಷಣ ಕಾಣಿಸಿಕೊಂಡಿದ್ದು, 3964 ಜನರಿಗೆ ದೃಢಪಟ್ಟಿದೆ. ಅದೇ ರೀತಿ 20.70 ಲಕ್ಷ ಜನರಿಗೆ ಸ್ತನ ಕ್ಯಾನ್ಸರ್ ಹಾಗೂ 16.7 ಲಕ್ಷ ವ್ಯಕ್ತಿಗಳನ್ನು ಗರ್ಭಕಂಠದ ಕ್ಯಾನ್ಸರ್ ತಪಾಸಣೆಗೆ ಒಳಪಡಿಸಿದಾಗ 11998 ಜನರಿಗೆ ಈ ಕ್ಯಾನ್ಸರ್ ಲಕ್ಷಣ ಕಂಡು ಬಂದಿದೆ. ಈ ಪೈಕಿ 3272 ಜನರಿಗೆ ಸ್ತನ ಕ್ಯಾನ್ಸರ್ ಹಾಗೂ 1658 ಜನರಿಗೆ ಗರ್ಭಕಂಠದ ಕ್ಯಾನ್ಸರ್ ದೃಢಪಟ್ಟಿದೆ.
ಕ್ಯಾನ್ಸರ್ ಹೆಚ್ಚಳ ಏಕೆ?:
ಖ್ಯಾತ ಕ್ಯಾನ್ಸರ್ ತಜ್ಞ ಡಾ.ಯು.ಎಸ್.ವಿಶಾಲ್ ರಾವ್ ಪ್ರಕಾರ, ಇತ್ತೀಚಿನ 10 ವರ್ಷಗಳ ಕಂಡು ಬಂದಿರುವ ಅಂಶಗಳನ್ನು ಗಮನಿಸಿದಾಗ, ಜೀವನ ಶೈಲಿ ಬದಲಾಯಿಸಿಕೊಂಡು ಕ್ಯಾನ್ಸರ್ ಸ್ವಭಾವ ತೆಗೆದುಕೊಂಡಿದ್ದೇವೆ. ಜನ ಸಾಮಾನ್ಯರು ತಕ್ಷಣವಾಗಿ ತಯಾರಿಸುವ ರಾಸಾಯನಿಕಯಕ್ತ ಆಹಾರ ಪಾದಾರ್ಥಗಳನ್ನು (ಇನ್ಸ್ಟಂಟ್) ಅತಿಯಾಗಿ ಬಳಸುತ್ತಿದ್ದಾರೆ.
ಶರೀರಕ್ಕೆ ಅಗತ್ಯವಿಲ್ಲದಿದ್ದರೂ ಬಾಯಿ ಚಪಲಕ್ಕಾಗಿ ಬಣ್ಣ, ಕಲಬೆರಕೆ ಮಿಶ್ರಣ, ರಾಸಾಯನಿಕ ಮಿಶ್ರಿತ ಆಹಾರ ಸೇವಿಸುತ್ತಿದ್ದಾರೆ. ಕಡಿಮೆ ನೀರು ಸೇವನೆ, ಕಡಿಮೆ ಚಟುವಟಿಕೆ, ವ್ಯಾಯಾಮ ಮಾಡದಿರುವುದು ಹಾಗೂ ಶರೀರಕ್ಕೆ ಅಗತ್ಯವಾಗಿ ಬೇಕಾಗಿರುವುದಕ್ಕಿಂತ 3 ಪಟ್ಟು ಹೆಚ್ಚುವರಿಯಾಗಿ ಆಹಾರ ಸೇವನೆಯಿಂದ ಸಹಜವಾಗಿ ದೇಹದ ಒಳಾಂಗಗಳಲ್ಲಿ ಕೊಬ್ಬು ಹೆಚ್ಚಾಗುತ್ತದೆ. ಇದು ಕೆಟ್ಟ ಹಾರ್ಮೋನುಗಳನ್ನು ಬಿಡುಗಡೆ ಮಾಡಿ ಕ್ಯಾನ್ಸರ್ಗಳಿಗೆ ಕಾರಣವಾಗುತ್ತದೆ. ಇದರ ಜತೆಗೆ ಎಲ್ಲವೂ ತಕ್ಷಣ ಆಗಬೇಕು ಎಂಬ ಮನಸ್ಥಿತಿಯಿಂದ ದೇಹದ ಜೀವಕೋಶಗಳೂ (ಸೆಲ್) ಬೇಗ ಕೆಲಸ ಮಾಡುತ್ತವೆ. ದೇಹದ ಹಾರ್ಮೊನಲ್ ಹಾಗೂ ಕೆಮಿಕಲ್ ಅಸಮತೋಲನಗಳಿಂದ ನಮ್ಮ ಶಾರೀರತ್ವದ ಕೆಲಸದ ಸಾಮಗ್ರಿಗಳಲ್ಲಿ ಕ್ಯಾನ್ಸರ್ ಎಂಬ ಸ್ವಭಾವ ಬಂದುಬಿಟ್ಟು ಅದೇ ನಿರ್ಮಾಣ ಆಗುತ್ತಿರುವುದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕ್ಯಾನ್ಸರ್ ತಡೆಯಲು ಏನೆಲ್ಲ ಮಾಡಿದರೆ ಉತ್ತಮ?:
-ದೇಹದ ತೂಕ ಸಮತೋಲನವಿರುವಂತೆ ನೋಡಿಕೊಳ್ಳಿ
-ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರ ಸೇವಿಸಿ
-ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ದೈಹಿಕವಾಗಿ ಚಟುವಟಿಕೆಯಿಂದ ಇರಿ
-ಧೂಮಪಾನ, ಮದ್ಯಪಾನ, ಮಾದಕ ವಸ್ತು ಸೇವನೆಯಿಂದ ದೂರವಿರಿ
-ನಿದ್ರೆ, ಒತ್ತಡ ಮತ್ತು ಮಾನಸಿಕ ಆರೋಗ್ಯವನ್ನು ನಿರ್ವಹಿಸಿ
-ನಿಯಮಿತವಾಗಿ ಆಹಾರ ಸೇವನೆ ಮಾಡಿ
-ಗರ್ಭಕಂಠದ ಕ್ಯಾನ್ಸರ್ ಬಾರದಿರಲು 14 ವರ್ಷ ವಯಸ್ಸಿನ ಹೆಣ್ಣುಮಕ್ಕಳು ಎಚ್ಪಿವಿ ಲಸಿಕೆ ಹಾಕಿಸಿಕೊಳ್ಳಿ