ಬೆಂಗಳೂರು, ಮಾ. 12 (DaijiworldNews/AK): ಮುಖ್ಯಮಂತ್ರಿಗಳು ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಈ ಬಜೆಟ್ ಗಮನಿಸಿದರೆ ಈ ಸರಕಾರದ ಆರ್ಥಿಕ- ಬೌದ್ಧಿಕ ದಿವಾಳಿತನವು ಕೂಡ ಪ್ರದರ್ಶನಗೊಂಡಿದೆ. ಹಣಕಾಸಿನ ಸಚಿವರಾದ ಮುಖ್ಯಮಂತ್ರಿಗಳು ತನ್ನ ರಾಜಕೀಯ ಸಂಧ್ಯಾಕಾಲದಲ್ಲಿರುವ ಈ ಸಂದರ್ಭದಲ್ಲಿ 17ನೇ ಬಜೆಟ್ ಮಂಡಿಸಿದ್ದಾರೆ. ಅವರಿಗೆ ಒಂದು ಸುವರ್ಣಾವಕಾಶ ಇತ್ತು. ತಮ್ಮ ರಾಜಕೀಯ ಜೀವನದ ಸುದೀರ್ಘ ಅನುಭವದ ಆಧಾರದ ಮೇಲೆ ರಾಜ್ಯದ ಸಂಕಷ್ಟಗಳಿಗೆ ನಾಡಿನ ಜನರ ಅಪೇಕ್ಷೆಗೆ ತಕ್ಕಂತೆ ಉತ್ತರ ಕಂಡುಕೊಳ್ಳುವ ಅವಕಾಶ ಇತ್ತು. ಆದರೆ, ಈ ಬಜೆಟ್ ನೋಡಿದಾಗ ಅಸಹಾಯಕರಾಗಿ ಕೈಚೆಲ್ಲಿದ್ದಾರೆಂಬ ಭಾವನೆ ರಾಜ್ಯದ ಜನರಲ್ಲಿ ಮೂಡಿದೆ ಎಂದು ವಿಶ್ಲೇಷಿಸಿದರು.
ಒಟ್ಟಾರೆಯಾಗಿ ಬಜೆಟ್ನಲ್ಲಿ ಮುಖ್ಯಮಂತ್ರಿಗಳು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕೇಂದ್ರ ಸರಕಾರದ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳುವ ಕುತಂತ್ರಕ್ಕೆ ಈ ಬಜೆಟ್ಟನ್ನು ಸೀಮಿತ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದಾಯ ಸಂಗ್ರಹದಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಅತಿ ಹೆಚ್ಚು ಸಾಲ ಮಾಡುವ ಮೂಲಕ ಈ ನಾಡಿನ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಎಂದರು.
ಪದೇಪದೇ ಬೆಲೆ ಏರಿಕೆಯ ಬ್ರಹ್ಮಾಸ್ತ್ರ..
ಸಾಲದ ಭಾರ ಒಂದು ಕಡೆಯಾದರೆ, ಅಸಲು,ಬಡ್ಡಿ ಕಟ್ಟುವುದೇ ರಾಜ್ಯಕ್ಕೆ ದೊಡ್ಡ ಹೊರೆ ಆಗಿದೆ. ವಿತ್ತೀಯ ಕೊರತೆ ಹೆಚ್ಚಾಗಿ ರಾಜ್ಯದ ಜನರ ಮೇಲೆ ಪದೇಪದೇ ಬೆಲೆ ಏರಿಕೆಯ ಬ್ರಹ್ಮಾಸ್ತ್ರವನ್ನು ರಾಜ್ಯ ಸರಕಾರ ಪ್ರಯೋಗ ಮಾಡುತ್ತಿರುವುದು ಈ ನಾಡಿನ ದುರಂತ ಎಂದು ಬಿ.ವೈ.ವಿಜಯೇಂದ್ರ ಅವರು ಹೇಳಿದರು.
ಮುಖ್ಯಮಂತ್ರಿಗಳು ಬಜೆಟ್ ಅನ್ನು ಸುದೀರ್ಘವಾಗಿ ಓದುತ್ತಿರುವಾಗ ಆಡಳಿತ ಪಕ್ಷದ ಸದಸ್ಯರನ್ನು ಗಮನಿಸುತ್ತಿದ್ದೆ. ಆಡಳಿತ ಪಕ್ಷದ ಸದಸ್ಯರಿಗೂ ಈ ಬಜೆಟ್ ಬಗ್ಗೆ ಆಸಕ್ತಿ ಇರಲಿಲ್ಲ; ಅವರು ಅಸಹಾಯಕರಾಗಿ ಸದನದಿಂದ ಹೊರಹೋದ ಘಟನೆಯನ್ನೂ ನಾನು ಗಮನಿಸಿದ್ದೇನೆ ಎಂದು ತಿಳಿಸಿದರು.