ನವದೆಹಲಿ, ಮಾ. 12 (DaijiworldNews/TA): ಅದೆಷ್ಟೋ ಸಾವು ನೋವು, ಕುಟುಂಬ ಕಳೆದುಕೊಂಡು ಒಂಟಿಯಾಗಿ ಉಳಿಯೋ ಒಂದಷ್ಟು ಜನರು ಒಂದೆಡೆಯಾದ್ರೆ ಮತ್ತೊಂದೆಡೆ ರಕ್ತದ ಮಡುವಿನಲ್ಲಿ ಅಂತ್ಯ ಕಾಣುತ್ತಿರೋ ಅದೆಷ್ಟೊ ತಲೆಮಾರುಗಳು. ಇದು ಯುದ್ದದಿಂದ ನಶಸಿಹೋಗುವ ಮನುಷ್ಯನೊಬ್ಬನ ಪರಿವಾರದ ಅಂತ್ಯದ ಚಿತ್ರಣ. ಸುಲಭವಾಗಿಯೇ ಸುದ್ದಿಯಾಗುವ ವಿಚಾರ ಕೂಡಾ ಹೌದು. ಆದರೆ ಮನುಷ್ಯನ ಮರಣಕ್ಕೆ ಮರುಗುತ್ತಿರೋ ನಾವು ಸುದ್ದಿಲ್ಲದೆ ಯಾವುದೇ ತಪ್ಪು ಮಾಡದೆ ನಾಶವಾಗುತ್ತಿರುವ ಮುಗ್ದ ಜೀವ ಸಂಕುಲಗಳ ನಮ್ಮನ್ನು ಕಾಪಾಡುತ್ತಿರೋ ಪರಿಸರ ನಾಶದ ಬಗ್ಗೆ ಮೌನವಾಗಿದ್ದೇವೆ.

ನಿಜ ಯುದ್ದ ಅಂದಾಕ್ಷಣ ಕೇವಲ ಮನುಷ್ಯನ ಅಧಿಕಾರ ದಾಹಕ್ಕೋ ಮತ್ಯಾವುದೋ ಕಾರಣಕ್ಕಾಗಿ ಕಾಣುವ ರಕ್ತದೋಕುಳಿ ಮಾತ್ರವಲ್ಲ ಜೊತೆಗೆ ಅದೆಷ್ಟೋ ಮುಗ್ಧ ಪ್ರಾಣಿಗಳನ್ನು ಬಲಿ ಪಡೆಯೋ ಮನುಜಕುಲದ ಸ್ವಾರ್ಥದ ದಾಹವೂ ಆಗಿದೆ. ನಿಜ ಯುದ್ದ ಎಂದರೆ ಕೇವಲ ಎರಡು ದೇಶಗಳ ನಡುವಿನ ಶಸ್ತ್ರಾಸ್ತ್ರಗಳ ಹೋರಾಟ ಮಾತ್ರವಲ್ಲ, ಅದು ಪ್ರಕೃತಿಯ ವಿರುದ್ಧ ನಡೆಯುವ ಮೌನ ಸಮರವೂ ಹೌದು.
ಇದೀಗ ಪಶ್ಚಿಮ ಏಷ್ಯಾದಲ್ಲಿ ಉರಿಯುತ್ತಿರುವ ಸಂಘರ್ಷದ ಕಿಚ್ಚು ಕೇವಲ ಮಾನವ ಜೀವಗಳನ್ನು ಬಲಿ ಪಡೆಯುವುದಲ್ಲ, ಅಲ್ಲಿನ ಅಮೂಲ್ಯ ಜೀವವೈವಿಧ್ಯವನ್ನೂ ಭಸ್ಮಗೊಳಿಸುತ್ತಿದೆ. ಹಸಿರು ಕಾಡುಗಳು, ಅಪರೂಪದ ಪ್ರಾಣಿ ಸಂಕುಲಗಳು ಹಾಗೂ ಫಲವತ್ತಾದ ಭೂಮಿ ಇಂದು ಬಾಂಬ್ ದಾಳಿ ಮತ್ತು ವಿಷಕಾರಿ ಹೊಗೆಯಿಂದ ನಲುಗಿ ಹೋಗುತ್ತಿವೆ.
ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಈ ತೀವ್ರ ಸಂಘರ್ಷ ಈಗ ಕೇವಲ ಗಡಿಗಳ ನಡುವಿನ ಕಾಳಗವಾಗಿ ಉಳಿದಿಲ್ಲ. ಕ್ಷಿಪಣಿಗಳ ದಾಳಿ, ಬಾಂಬ್ ಸ್ಫೋಟ ಮತ್ತು ರಾಸಾಯನಿಕ ಅಸ್ತ್ರಗಳ ಬಳಕೆಯಿಂದ ಗಾಳಿ, ನೀರು ಮತ್ತು ಮಣ್ಣು ಗಂಭೀರವಾಗಿ ಹಾನಿಗೊಳಗಾಗುತ್ತಿವೆ. ಯುದ್ಧದ ಪರಿಣಾಮವಾಗಿ ಕಾಡುಗಳು ಸುಟ್ಟು ಹೋಗುತ್ತಿದ್ದು, ಸಮುದ್ರಗಳು ಮಲಿನಗೊಳ್ಳುತ್ತಿವೆ. ಈ ಪರಿಸರ ಹಾನಿಯ ಪರಿಣಾಮ ಮುಂದಿನ ಪೀಳಿಗೆಗಳ ಮೇಲೂ ದೀರ್ಘಕಾಲದ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಗುಂಪುಗಳ ನಡುವಿನ ದಾಳಿ-ಪ್ರತಿದಾಳಿಗಳು ಪಶ್ಚಿಮ ಏಷ್ಯಾದ ಜೀವವೈವಿಧ್ಯಕ್ಕೆ ತುಂಬಲಾರದ ನಷ್ಟ ಉಂಟುಮಾಡಿವೆ. ವೈಮಾನಿಕ ದಾಳಿಗಳು ಮತ್ತು ಕ್ಷಿಪಣಿ ದಾಳಿಗಳಿಂದ ವಾತಾವರಣಕ್ಕೆ ಟನ್ಗಳಷ್ಟು ಕಾರ್ಬನ್ ಡೈಆಕ್ಸೈಡ್ ಹಾಗೂ ಹಾನಿಕಾರಕ ಅನಿಲಗಳು ಬಿಡುಗಡೆಯಾಗುತ್ತಿವೆ. ಇದು ಜಾಗತಿಕ ತಾಪಮಾನ ಏರಿಕೆಗೆ ಮತ್ತಷ್ಟು ಕಾರಣವಾಗುತ್ತಿದೆ ಎಂದು ಪರಿಸರ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಪರಿಸರದ ಮೇಲೆ ಪ್ರಮುಖ ಪರಿಣಾಮಗಳು :
* ಯುದ್ಧದಲ್ಲಿ ಬಳಸಲಾಗುತ್ತಿರುವ ಬಿಳಿ ರಂಜಕ ಮನುಷ್ಯರ ಚರ್ಮಕ್ಕೆ ಮಾತ್ರವಲ್ಲ, ಮಣ್ಣಿನ ಫಲವತ್ತತೆಯನ್ನೂ ನಾಶಮಾಡುತ್ತಿದೆ. ಇದು ದಶಕಗಳ ಕಾಲ ಮಣ್ಣಿನಲ್ಲಿ ಉಳಿದು ಕೃಷಿಗೆ ದೊಡ್ಡ ಹೊಡೆತ ನೀಡಬಹುದು.
* ಕ್ಷಿಪಣಿ ದಾಳಿಗಳು ಮತ್ತು ತೈಲ ಡಿಪೋಗಳ ಸ್ಫೋಟದಿಂದ ಆಕಾಶ ಕಪ್ಪು ಹೊಗೆಯಿಂದ ಆವೃತವಾಗುತ್ತಿದೆ. ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್ಗಳಂತಹ ವಿಷಕಾರಿ ಅನಿಲಗಳು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗುತ್ತಿವೆ.
* ರಾಸಾಯನಿಕ ತ್ಯಾಜ್ಯಗಳು ಅಂತರ್ಜಲ ಮತ್ತು ಸಮುದ್ರಕ್ಕೆ ಸೇರಿ ನೀರಿನ ಗುಣಮಟ್ಟ ಹಾಳಾಗುತ್ತಿದೆ. ಇದರಿಂದ ಸಮುದ್ರ ಜೀವಿಗಳು ನಾಶವಾಗುವ ಭೀತಿ ಎದುರಾಗಿದೆ.
* ಇಸ್ರೇಲ್–ಲೆಬನಾನ್ ಗಡಿ ಭಾಗದಲ್ಲಿರುವ ಸಾವಿರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಅಪರೂಪದ ವನ್ಯಜೀವಿಗಳು ಹಾಗೂ ಪಕ್ಷಿ ಸಂಕುಲಗಳು ವಿನಾಶದ ಅಂಚಿಗೆ ತಲುಪಿವೆ.
ಪರಿಸರ ತಜ್ಞರ ಅಂದಾಜಿನ ಪ್ರಕಾರ, ಈ ಯುದ್ಧದಿಂದ ಉಂಟಾದ ಪರಿಸರ ಹಾನಿಯನ್ನು ಸಂಪೂರ್ಣವಾಗಿ ಸರಿಪಡಿಸಲು ಕನಿಷ್ಠ 50 ರಿಂದ 100 ವರ್ಷಗಳ ಕಾಲ ಬೇಕಾಗಬಹುದು. ಯುದ್ಧದಲ್ಲಿ ಬಳಸಲಾಗುವ ಸ್ಫೋಟಕಗಳಲ್ಲಿ ಇರುವ ಸೀಸ ಮತ್ತು ಪಾದರಸದಂತಹ ಭಾರಲೋಹಗಳು ಮಣ್ಣನ್ನು ಶಾಶ್ವತವಾಗಿ ಬಂಜರುಗೊಳಿಸುತ್ತಿವೆ.
ಇದೇ ವೇಳೆ, ತೈಲ ಸೌಲಭ್ಯಗಳ ಮೇಲೆ ದಾಳಿ ನಡೆದರೆ ಉಂಟಾಗುವ ತೈಲ ಸೋರಿಕೆ ಇಡೀ ಪ್ರದೇಶದ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಹಾಳುಮಾಡುವ ಸಾಧ್ಯತೆ ಇದೆ. ಈಗಾಗಲೇ ಯುದ್ಧಭೂಮಿಯಲ್ಲಿ ಸಾವಿರಾರು ಟನ್ ಕಟ್ಟಡಗಳ ಅವಶೇಷಗಳು ಮತ್ತು ಘನ ತ್ಯಾಜ್ಯಗಳು ರಾಶಿಯಾಗಿ ಬಿದ್ದಿದ್ದು, ಅವುಗಳಲ್ಲಿ ಇರುವ ಕಲ್ನಾರು ಸೇರಿದಂತೆ ಅಪಾಯಕಾರಿ ವಸ್ತುಗಳು ಸಾರ್ವಜನಿಕ ಆರೋಗ್ಯಕ್ಕೆ ದೀರ್ಘಕಾಲದ ಅಪಾಯವನ್ನು ಉಂಟುಮಾಡಲಿವೆ.
ಒಟ್ಟಿನಲ್ಲಿ, ಮನುಷ್ಯರ ಅಧಿಕಾರ ದಾಹಕ್ಕೆ ಪ್ರಕೃತಿ ಮತ್ತು ಮೂಕಪ್ರಾಣಿಗಳು ಬಲಿಯಾಗುತ್ತಿವೆ. ಆಯುಧಗಳ ಸದ್ದಿನ ನಡುವೆ ನಡೆಯುತ್ತಿರುವ ಪರಿಸರ ನಾಶವು ಭವಿಷ್ಯದ ಪೀಳಿಗೆಗೆ ಭೀಕರ ಸವಾಲಾಗಿ ಪರಿಣಮಿಸಲಿದೆ. ವಿಶ್ವ ಸಮುದಾಯ ಈಗಲೇ ಎಚ್ಚೆತ್ತು ಈ ಪರಿಸರ ಮಾರಣಹೋಮವನ್ನು ತಡೆಯದಿದ್ದರೆ, ಮುಂದಿನ ದಿನಗಳಲ್ಲಿ ಮನುಷ್ಯರಿಗೆ ಬದುಕಲು ಭೂಮಿಯೇ ಸಂಕಷ್ಟವಾಗಬಹುದು ಎಂಬ ಆತಂಕ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.