ಶ್ರೀನಗರ, ಮಾ. 12 (DaijiworldNews/TA): ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಬುಧವಾರ (ಮಾರ್ಚ್ 11) ಸಂಜೆ ಅವರು ಭಾಗವಹಿಸಿದ್ದ ವಿವಾಹ ಸಮಾರಂಭವೊಂದರಲ್ಲಿ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ದಾಳಿ ನಡೆಸಿದ್ದಾನೆ. ಆದರೆ ಅದೃಷ್ಟವಶಾತ್ ಫಾರೂಕ್ ಅಬ್ದುಲ್ಲಾ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ವೇಳೆ ದಾಳಿಕೋರ ಫಾರೂಕ್ ಅಬ್ದುಲ್ಲಾ ಅವರಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿದ್ದನು. ಅಷ್ಟರಲ್ಲಿ ಅಲ್ಲಿದ್ದ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್ಡಿಜಿ) ಕಮಾಂಡೋಗಳು ತಕ್ಷಣವೇ ಮಧ್ಯ ಪ್ರವೇಶಿಸಿ ಅವನನ್ನು ತಳ್ಳಿಹಾಕಿದ್ದಾರೆ. ಇದರ ಪರಿಣಾಮವಾಗಿ ಗುಂಡು ಗುರಿ ತಪ್ಪಿ ಅಬ್ದುಲ್ಲಾ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ದಾಳಿಕೋರನನ್ನು ಕಮಲ್ ಸಿಂಗ್ ಜಮ್ವಾಲ್ ಎಂದು ಗುರುತಿಸಲಾಗಿದ್ದು, ಘಟನೆ ನಡೆದ ತಕ್ಷಣವೇ ಭದ್ರತಾ ಸಿಬ್ಬಂದಿ ಅವನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅಲ್ಲಿದ್ದ ಜನರು ಆತನನ್ನು ಹಿಡಿದು ಥಳಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯು ಜಮ್ಮುವಿನ ಪುರಾಣಸ್ ಮಂಡಿ ಪ್ರದೇಶದ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.