ಬೆಂಗಳೂರು, ಮಾ. 11 (DaijiworldNews/TA): ಕಳೆದ ಮೂರು ವರ್ಷಗಳಲ್ಲಿ ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಷ್ಟು ಐಟಿ–ಬಿಟಿ ಕಂಪನಿಗಳು ಮತ್ತು ಸ್ಟಾರ್ಟ್ಅಪ್ ಸಂಸ್ಥೆಗಳು ಆರಂಭಗೊಂಡಿವೆ ಎಂಬ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಶಾಸಕ ವೇದವ್ಯಾಸ ಕಾಮತ್ ಅವರು ಬಜೆಟ್ ಅಧಿವೇಶನದಲ್ಲಿ ಪ್ರಶ್ನಿಸಿದರು.

ಈ ಸಂಬಂಧ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ ಅವರು ಪ್ರಶ್ನೆ ಕೇಳಿದರು. ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಷ್ಟು ಐಟಿ–ಬಿಟಿ ಕಂಪನಿಗಳು ಮತ್ತು ಸ್ಟಾರ್ಟ್ಅಪ್ ಸಂಸ್ಥೆಗಳು ಆರಂಭಗೊಂಡಿವೆ, ಎಷ್ಟು ಒಡಂಬಡಿಕೆಗಳು ನಡೆದಿವೆ ಮತ್ತು ಎಷ್ಟು ಪ್ರಮಾಣದ ಬಂಡವಾಳ ಹೂಡಿಕೆ ಆಗಿದೆ ಎಂಬ ವಿವರಗಳನ್ನು ನೀಡುವಂತೆ ಪ್ರಶ್ನಿಸಿದರು.
ಇದರ ಜೊತೆಗೆ ಜಿಲ್ಲಾವಾರು ಎಷ್ಟು ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂಬುದರ ಬಗ್ಗೆ ಕೂಡ ಮಾಹಿತಿ ನೀಡುವಂತೆ ಕೇಳಿದರು. ವಿಶೇಷವಾಗಿ ಕರಾವಳಿ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.