ಬೆಂಗಳೂರು, ಮಾ. 11 (DaijiworldNews/TA): ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷ ಹಿನ್ನೆಲೆಯಲ್ಲಿ ಇಂಧನ ಸರಬರಾಜಿನ ಬಗ್ಗೆ ಆತಂಕ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಎಲ್ಪಿಜಿ ಸಿಲಿಂಡರ್ ಕೊರತೆ ಉಂಟಾಗಬಹುದು ಎಂಬ ಪುಕಾರು ಹರಿದಾಡುತ್ತಿದ್ದು, ಜನರು ಚಿಂತಾಕ್ರಾಂತರಾಗಿದ್ದಾರೆ. ಆದರೆ ಬಹುತೇಕ ಜನರಿಗೆ ತಿಳಿದಿರದ ಒಂದು ಪರ್ಯಾಯ ಮಾರ್ಗ ಇದೆ. ಮನೆಯಲ್ಲೇ ಬಯೋಗ್ಯಾಸ್ ಉತ್ಪಾದನೆ ಮಾಡಿಕೊಳ್ಳುವ ಮೂಲಕ ಅಡುಗೆ ಅನಿಲದ ಸಮಸ್ಯೆಗೆ ಸರಳ ಪರಿಹಾರ ಕಂಡುಕೊಳ್ಳಬಹುದು.

ಎಲ್ಪಿಜಿ ಸಿಲಿಂಡರ್ ಬೆಲೆ ದಿನೇ ದಿನೇ ಏರುತ್ತಿರುವುದರ ಜೊತೆಗೆ ನಗರ ಪ್ರದೇಶಗಳಲ್ಲಿ ಹಸಿ ಕಸದ ವಿಲೇವಾರಿ ದೊಡ್ಡ ಸಮಸ್ಯೆಯಾಗುತ್ತಿದೆ. ಈ ಎರಡು ಸಮಸ್ಯೆಗಳಿಗೆ ಪರಿಹಾರವಾಗಿ ಮನೆಯಲ್ಲೇ ನಿರ್ಮಿಸಬಹುದಾದ ಬಯೋಗ್ಯಾಸ್ ಘಟಕ ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ. ಕೇವಲ ರೂ.500 ರಿಂದ ರೂ.5,000 ವೆಚ್ಚದಲ್ಲಿ ನಿರ್ಮಿಸಬಹುದಾದ ಈ ಘಟಕವು ಒಂದು ಸಾಮಾನ್ಯ ಕುಟುಂಬದ ಅಡುಗೆ ಅನಿಲ ವೆಚ್ಚವನ್ನು ಶೇ.50 ಕ್ಕಿಂತಲೂ ಹೆಚ್ಚು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.
ಬಯೋಗ್ಯಾಸ್ ಘಟಕವನ್ನು ತಯಾರಿಸಲು ಎರಡು ಪ್ಲಾಸ್ಟಿಕ್ ಡ್ರಮ್ಗಳು ಬೇಕಾಗುತ್ತವೆ. ಸಾಮಾನ್ಯವಾಗಿ ಒಂದು 200 ಲೀಟರ್ ಸಾಮರ್ಥ್ಯದ ದೊಡ್ಡ ಡ್ರಮ್ ಮತ್ತು ಅದಕ್ಕಿಂತ ಸ್ವಲ್ಪ ಸಣ್ಣದಾದ 150 ಲೀಟರ್ ಡ್ರಮ್ ಬಳಸಲಾಗುತ್ತದೆ. ದೊಡ್ಡ ಡ್ರಮ್ನ ಮೇಲ್ಭಾಗವನ್ನು ಕತ್ತರಿಸಿ ಅದರಲ್ಲಿ ಹಸಿ ಕಸ ಹಾಕಲು ಒಂದು ಪೈಪ್ ಅಳವಡಿಸಲಾಗುತ್ತದೆ. ಹೆಚ್ಚುವರಿ ತ್ಯಾಜ್ಯ ಹೊರಹೋಗಲು ಮತ್ತೊಂದು ಪೈಪ್ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಸಣ್ಣ ಡ್ರಮ್ ಅನ್ನು ದೊಡ್ಡ ಡ್ರಮ್ ಒಳಗೆ ತಲೆಕೆಳಗಾಗಿ ಇಡಲಾಗುತ್ತದೆ. ಈ ಸಣ್ಣ ಡ್ರಮ್ ಗ್ಯಾಸ್ ಸಂಗ್ರಹಿಸುವ ಪಾತ್ರೆಯಾಗಿ ಕೆಲಸ ಮಾಡುತ್ತದೆ.
ಘಟಕವನ್ನು ಆರಂಭಿಸಲು ದೊಡ್ಡ ಡ್ರಮ್ ಒಳಗೆ ಸುಮಾರು 20 ರಿಂದ 30 ಕೆಜಿ ಹಸಿ ಸಗಣಿಯನ್ನು ಸಮಪ್ರಮಾಣದ ನೀರಿನೊಂದಿಗೆ ಬೆರೆಸಿ ಹಾಕಬೇಕು. ಈ ಮಿಶ್ರಣವು ಡ್ರಮ್ ಒಳಗೆ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ. ನಂತರ ಡ್ರಮ್ ಅನ್ನು ಗಾಳಿಯಾಡದಂತೆ ಭದ್ರಪಡಿಸಲಾಗುತ್ತದೆ. ಸುಮಾರು 15 ರಿಂದ 20 ದಿನಗಳ ಬಳಿಕ ಈ ಮಿಶ್ರಣ ಕೊಳೆಯುವ ಪ್ರಕ್ರಿಯೆಯಲ್ಲಿ ಮಿಥೇನ್ ಅನಿಲ ಉತ್ಪತ್ತಿಯಾಗುತ್ತದೆ. ಈ ಅನಿಲವು ಒಳಗಿನ ಸಣ್ಣ ಡ್ರಮ್ ಅನ್ನು ಮೇಲಕ್ಕೆ ತಳ್ಳುತ್ತದೆ. ಅದರಿಂದ ಗ್ಯಾಸ್ ಸಿದ್ಧವಾಗಿದೆ ಎಂದು ತಿಳಿಯಬಹುದು. ಬಳಿಕ ಒಂದು ಸಣ್ಣ ಪೈಪ್ ಮೂಲಕ ಈ ಗ್ಯಾಸ್ ಅನ್ನು ಅಡುಗೆ ಮನೆಗೆ ಸಂಪರ್ಕಿಸಿ ಬಯೋಗ್ಯಾಸ್ ಸ್ಟೌವ್ ಮೂಲಕ ಬಳಸಬಹುದು. ಪ್ರತಿದಿನ ಮನೆಯ ಹಸಿ ಕಸವನ್ನು ಪೇಸ್ಟ್ ಮಾಡಿ ಈ ಘಟಕಕ್ಕೆ ಹಾಕುತ್ತಿದ್ದರೆ ನಿರಂತರವಾಗಿ ಅನಿಲ ಉತ್ಪತ್ತಿಯಾಗುತ್ತದೆ.
ಬಯೋಗ್ಯಾಸ್ ಉತ್ಪಾದನೆಗೆ ಕೆಲವು ರೀತಿಯ ಕಸಗಳು ಹೆಚ್ಚು ಪರಿಣಾಮಕಾರಿ ಎನ್ನಲಾಗುತ್ತದೆ. ವಿಶೇಷವಾಗಿ ಸಕ್ಕರೆ ಅಂಶ ಹೆಚ್ಚಿರುವ ಹಾಳಾದ ಹಣ್ಣುಗಳು, ಬಾಳೆಹಣ್ಣು, ಪಪ್ಪಾಯಿ, ಹಳಸಿದ ಅನ್ನ, ಬೇಳೆ ಸಾರು ಹಾಗೂ ಹಿಟ್ಟಿನ ಪದಾರ್ಥಗಳನ್ನು ಹಾಕಿದರೆ ಹೆಚ್ಚಿನ ಪ್ರಮಾಣದಲ್ಲಿ ಅನಿಲ ಉತ್ಪತ್ತಿಯಾಗುತ್ತದೆ. ಸಗಣಿ ಆರಂಭಿಕ ಹಂತದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಗೆ ನೆರವಾಗುತ್ತದೆ. ಆದರೆ ನಿಂಬೆ ಜಾತಿಯ ಹಣ್ಣುಗಳು ಮತ್ತು ಈರುಳ್ಳಿ ಸಿಪ್ಪೆಗಳನ್ನು ಹಾಕುವುದನ್ನು ತಜ್ಞರು ತಪ್ಪಿಸಲು ಸಲಹೆ ನೀಡುತ್ತಾರೆ.
ಎಲ್ಪಿಜಿಗೆ ಹೋಲಿಸಿದರೆ ಬಯೋಗ್ಯಾಸ್ ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಅನಿಲ ಉತ್ಪಾದನೆಯ ನಂತರ ಹೊರಬರುವ ದ್ರವವು ಗಿಡಗಳಿಗೆ ಅತ್ಯುತ್ತಮ ಸಾವಯವ ಗೊಬ್ಬರವಾಗುತ್ತದೆ. ಎಲ್ಪಿಜಿಯಲ್ಲಿ ಇರುವಷ್ಟು ಹೆಚ್ಚಿನ ಒತ್ತಡ ಬಯೋಗ್ಯಾಸ್ನಲ್ಲಿ ಇಲ್ಲದಿದ್ದರೂ, ದಿನನಿತ್ಯದ ಚಹಾ, ಉಪಾಹಾರ ಹಾಗೂ ಸಣ್ಣ ಅಡುಗೆಗಳಿಗೆ ಇದು ಸಾಕಷ್ಟು ಉಪಯುಕ್ತವಾಗಿದೆ.
ಹಳೆಯ ಡ್ರಮ್ ಮತ್ತು ಪೈಪ್ಗಳನ್ನು ಬಳಸಿದರೆ ಈ ಘಟಕವನ್ನು ರೂ. 500 ರಿಂದ ರೂ.1,500 ವೆಚ್ಚದಲ್ಲಿ ನಿರ್ಮಿಸಬಹುದು. ಹೊಸ ಸಾಮಗ್ರಿಗಳನ್ನು ಬಳಸಿದರೆ ಸುಮಾರು ರೂ. 5,000 ವರೆಗೆ ವೆಚ್ಚವಾಗಬಹುದು. ಈ ವ್ಯವಸ್ಥೆಯನ್ನು ಕೇವಲ 4 ರಿಂದ 5 ಗಂಟೆಗಳಲ್ಲಿ ಜೋಡಿಸಬಹುದು. ಮೊದಲ ಬಾರಿ ಗ್ಯಾಸ್ ಉತ್ಪತ್ತಿಯಾಗಲು ಸಾಮಾನ್ಯವಾಗಿ 15 ರಿಂದ 25 ದಿನಗಳು ಬೇಕಾಗುತ್ತದೆ. ಪ್ಲಾಸ್ಟಿಕ್ ಡ್ರಮ್ನಿಂದ ಮಾಡಿದ ಘಟಕಗಳು ಕನಿಷ್ಠ 5 ರಿಂದ 10 ವರ್ಷಗಳವರೆಗೆ ಬಾಳಿಕೆ ಬರುತ್ತವೆ. ದೊಡ್ಡ ಗಾತ್ರದ ಟ್ಯಾಂಕ್ ಅಥವಾ ಸಿಂಟೆಕ್ಸ್ ಬಳಸಿದರೆ 20 ರಿಂದ 30 ವರ್ಷಗಳವರೆಗೆ ಬಳಸಬಹುದು.
ಮನೆಯ ಹಸಿ ಕಸವನ್ನು ರಸ್ತೆಗೆ ಎಸೆಯುವ ಬದಲು ಅದನ್ನು ಮನೆಯಲ್ಲೇ ಇಂಧನವನ್ನಾಗಿ ಮಾರ್ಪಡಿಸಿಕೊಳ್ಳುವುದು ಇಂದಿನ ಪರಿಸ್ಥಿತಿಯಲ್ಲಿ ಆರ್ಥಿಕವಾಗಿಯೂ ಪರಿಸರದ ದೃಷ್ಟಿಯಿಂದಲೂ ಅತ್ಯುತ್ತಮ ಪರಿಹಾರವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.