ನವದೆಹಲಿ, ಮಾ. 11 (DaijiworldNews/AK): ಸೌರ ವಿದ್ಯುತ್ ಮೂಲಕ ರೈತರ ಸಬಲೀಕರಣಕ್ಕಾಗಿ ಕೃಷಿ ಪಿವಿ ನಿಯೋಜನೆ ಉತ್ತೇಜಿಸಲು ಕೇಂದ್ರ ಸರ್ಕಾರ PM ಕುಸುಮ್ 2.0 ಅನ್ನು ಸಿದ್ಧಪಡಿಸುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ದೆಹಲಿಯಲ್ಲಿ ನಡೆದ 4ನೇ ರಾಷ್ಟ್ರೀಯ ಕೃಷಿ-ಪರಿಸರ ತಂತ್ರಜ್ಞಾನ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಅಲ್ಲದೆ, ರೈತರು ಒಂದೇ ಭೂಮಿಯಲ್ಲಿ ಬೆಳೆ ಜೊತೆಗೆ ವಿದ್ಯುತ್ ಉತ್ಪಾದಿಸಲು ಅನುವು ಮಾಡಿಕೊಡುತ್ತದೆ. “PM ಕುಸುಮ್ 2.0” ಗ್ರಾಮೀಣ ಭಾರತದಲ್ಲಿ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೊಸ ಮಾದರಿ ಸೃಷ್ಟಿಸುತ್ತದೆ. ಈ ಮೂಲಕ ಗ್ರಾಮೀಣ ಆರ್ಥಿಕತೆ ಉತ್ತೇಜನ ಮತ್ತು ರೈತರ ಆದಾಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
PM ಕುಸುಮ್ ಯೋಜನೆಯಡಿ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಸೌರ ಕೃಷಿ ಪಂಪ್ಗಳನ್ನು ಸ್ಥಾಪಿಸಲಾಗಿದೆ ಮತ್ತು ದೇಶಾದ್ಯಂತ 13 ಲಕ್ಷಕ್ಕೂ ಹೆಚ್ಚು ಗ್ರಿಡ್-ಸಂಪರ್ಕಿತ ಕೃಷಿ ಪಂಪ್ಗಳನ್ನು ಸೌರೀಕರಣಗೊಳಿಸಲಾಗಿದೆ. ಇದರಿಂದಾಗಿ ರೈತರು ಇಂದು ಅನ್ನದಾತ ಮಾತ್ರವಲ್ಲ, ಉರ್ಜದಾತ (ಇಂಧನ ಪೂರೈಕೆದಾರರು) ಆಗಲು ಸಹ ಅನುವು ಮಾಡಿಕೊಡುತ್ತಿದೆ. ನವೀಕರಿಸಬಹುದಾದ ಇಂಧನ ಹೆಚ್ಚಿನ ಕೃಷಿ ಭೂಮಿ ಮತ್ತು ಮನೆಗಳನ್ನು ತಲುಪುತ್ತಿದೆ. ನೀರಾವರಿ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಕೃಷಿ ಉತ್ಪಾದಕತೆಯನ್ನೂ ಸುಧಾರಿಸಿ, ವಿಶ್ವಾಸಾರ್ಹ ರೀತಿಯಲ್ಲಿ ವಿದ್ಯುತ್ ಪಡೆಯಲು ಸಹಾಯ ಮಾಡುತ್ತಿದೆ ಎಂದು ತಿಳಿಸಿದರು.