ರಾಯ್ಪುರ್, ಮಾ. 11 (DaijiworldNews/AK): ಆರು ವರ್ಷಗಳ ಕಾಲ ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಜಯಿಸಿ ಮೂರು ಉದ್ಯೋಗಗಳಿಗೆ ರಾಜೀನಾಮೆ ನೀಡಿದ ಛತ್ತೀಸ್ಗಢದ ಮಹಾಸಮುಂದ್ ಜಿಲ್ಲೆಯ ಸಂಜಯ್ ದಹರಿಯಾ, ತಮ್ಮ ಮೂರನೇ ಪ್ರಯತ್ನದಲ್ಲಿ 2025 ರ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ 946 ನೇ ರ್ಯಾಂಕ್ ಗಳಿಸಿದ್ದಾರೆ. ಅವರ ಸ್ಪೂರ್ತಿದಾಯ ಕಥೆ ಇಲ್ಲಿದೆ.

ರೈತನ ಮಗನಾದ ದಹರಿಯಾ ಅವರ ಶೈಕ್ಷಣಿಕ ಪ್ರಯಾಣವು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಪ್ರಾರಂಭವಾಯಿತು, ಆದರೆ ಅವರು 5 ನೇ ತರಗತಿಯಲ್ಲಿ ಮಾನಾ (ರಾಯ್ಪುರ) ದಲ್ಲಿರುವ ಜವಾಹರ್ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ ಬಳಿಕ ಅವರ ಪ್ರಯಾಣ ಮಹತ್ವದ ತಿರುವು ಪಡೆದುಕೊಂಡಿತು.
ನಾಗರಿಕ ಸೇವೆಗಳ ಹಾದಿಯು ದಹರಿಯಾ ಅವರಿಗೆ ವೃತ್ತಿಪರ ಮತ್ತು ವೈಯಕ್ತಿಕ ಅಡೆತಡೆಗಳಿಂದ ತುಂಬಿತ್ತು. 2009 ರಿಂದ 2011 ರವರೆಗೆ ಪಶ್ಚಿಮ ಬಂಗಾಳದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಿದ ನಂತರ, ಉನ್ನತ ಗುರಿಗಳತ್ತ ಗಮನಹರಿಸಲು ಅವರು ರಾಜೀನಾಮೆ ನೀಡಿದರು. ಆದರೆ 2012 ರಲ್ಲಿ, ಅವರಿಗೆ ಲಾಲಾರಸ ಗ್ರಂಥಿಗಳಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಯಿತು, ಇದು ಆರು ವರ್ಷಗಳ ಕಾಲ ಚಿಕಿತ್ಸೆ ಪಡೆದರು.
ಸ್ವಲ್ಪ ದೃಷ್ಟಿ ದೋಷದಿಂದ ಬಳಲುತ್ತಿರುವ ದಹರಿಯಾ, ಧೃತಿಗೆಡದೆ, ನಾಗರಿಕ ಸೇವೆಗಳ ಅನ್ವೇಷಣೆಯನ್ನು ಮುಂದುವರೆಸಿದರು ಮತ್ತು ರಾಯ್ಪುರದ ಬ್ಯಾಂಕ್ ಮತ್ತು ಮಹಾಸಮುಂದ್ ಅಂಚೆ ಕಚೇರಿಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸಿದರು.
ಅವರು 2022 ರಲ್ಲಿ UPSC ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಲು ಪ್ರಾರಂಭಿಸಿದರು. 2025 ರಲ್ಲಿ ಮೂರನೇ ಪ್ರಯತ್ನದಲ್ಲಿ ಅದೃಷ್ಟದ ಬಾಗಿಲು ತೆರೆಯಿತು. ಈ ಮೂಲಕ ದಹರಿಯಾ,ಧೈರ್ಯ ಮತ್ತು ಪರಿಶ್ರಮಕ್ಕೆ ಉದಾಹರಣೆಯಾಗಿರುವ ಅವರ ಸಾಧನೆ ಶ್ಲಾಘನೀಯ.