ಬೆಂಗಳೂರು, ಮಾ. 10 (DaijiworldNews/AK): ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು ಪ್ರಧಾನ ಸೇವಕನೆಂಬ ಭಾವನೆಯೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ಭಾರತವು 2047ನೇ ಇಸವಿಗೆ ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆ ಹೊಂದಲು ಪುರುಷರ ಜೊತೆಜೊತೆಯಲ್ಲಿ ಮಹಿಳೆಯರ ಪಾತ್ರವೂ ಬಹಳ ಮಹತ್ವವನ್ನು ಹೊಂದಿದೆ ಎಂಬ ನಂಬಿಕೆ ಮೋದಿಜೀ ಅವರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಬೆಂಗಳೂರು ಮಹಾನಗರ ಮಹಿಳಾ ಮೋರ್ಚಾ ವತಿಯಿಂದ ಮಲ್ಲೇಶ್ವರದ ಹವ್ಯಕ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಡವರ ಮನೆಯ ಹೆಣ್ಣುಮಗು ಶಾಪ ಎಂದು ತಿರಸ್ಕರಿಸುವ ಕಾಲಘಟ್ಟವಿತ್ತು. ಆ ಮಗು ಶಾಪವಲ್ಲ; ಭಾಗ್ಯಲಕ್ಷ್ಮಿ ಎಂದು ತಿಳಿಸಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದ್ದರು ಎಂದು ವಿವರಿಸಿದರು.
ಆ ಮಗುವಿಗೆ ಬದುಕು ಕಟ್ಟಿಕೊಡುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ ಎಂದು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯ, ಅನಾನುಕೂಲತೆ ಕಾರಣದಿಂದ 5, 6 ಅಥವಾ 7ನೇ ತರಗತಿ ಬಳಿಕ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಮನೆಯಲ್ಲೇ ಉಳಿಯುವ ಸ್ಥಿತಿ ಇತ್ತು. ಯಡಿಯೂರಪ್ಪನವರ ಬಿಜೆಪಿ ಸರಕಾರದ ಬೈಸಿಕಲ್ ಯೋಜನೆ ಮೂಲಕ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ತಪ್ಪಿತು ಎಂದು ಹೇಳಿದರು.