ಬೆಂಗಳೂರು,ಮಾ. 10 (DaijiworldNews/AK): ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಇತ್ತೀಚೆಗೆ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಎಲ್ಪಿಜಿ ಉತ್ಪಾದನೆಗೆ ಗೃಹ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಪೂರೈಕೆಗೆ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
ಸಾಮಾನ್ಯವಾಗಿ ರಾಜ್ಯದ ಕಮರ್ಷಿಯಲ್ ಎಲ್ಪಿಜಿ ಬೇಡಿಕೆಯನ್ನು ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್ , ಎಚ್ಪಿಸಿಎಲ್ ಮತ್ತು ಬಿಪಿಸಿಎಲ್ ಮೂಲಕ ಪೂರೈಸಲಾಗುತ್ತದೆ. ಇದರಲ್ಲಿ ಐಒಸಿಎಲ್ ಪ್ರತಿದಿನ ಸುಮಾರು 500–550 ಮೆಟ್ರಿಕ್ ಟನ್, ಎಚ್ಪಿಸಿಎಲ್ 300 ಮೆಟ್ರಿಕ್ ಟನ್ ಮತ್ತು ಬಿಪಿಸಿಎಲ್ 230 ಮೆಟ್ರಿಕ್ ಟನ್ ವರೆಗೆ ಪೂರೈಕೆ ಮಾಡುತ್ತಿತ್ತು. ಆದರೆ ಈ ಪೂರೈಕೆಯಲ್ಲಿ ಉಂಟಾದ ದಿಡೀರ್ ವ್ಯತ್ಯಯದಿಂದ ಈಗ ಬಳಕೆದಾರರಿಗೆ ದೊಡ್ಡ ಸಮಸ್ಯೆ ಎದುರಾಗಿದೆ ಎಂದು ಸಿಎಂ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೋಟೆಲ್ ಹಾಗೂ ಕೇಟರಿಂಗ್ ಉದ್ಯಮಕ್ಕೆ ಅಗತ್ಯವಿರುವ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯನ್ನು ಶೀಘ್ರದಲ್ಲೇ ಪುನಃಸ್ಥಾಪಿಸಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ವಿನಂತಿಸಿದ್ದಾರೆ.