ನವದೆಹಲಿ, ಮಾ. 10 (DaijiworldNews/AA): ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಅನುಜ್ ಅಗ್ನಿಹೋತ್ರಿಗೆ ದೇಶಕ್ಕೆ ಮೊದಲ ರ್ಯಾಂಕ್ ಗಳಿಸಿದ್ದಾರೆ.

ಡಾ. ಅನುಜ್ ಅಗ್ನಿಹೋತ್ರಿಯವರು ರಾಜಸ್ಥಾನದ ಜೋಧ್ಪುರ ಜಿಲ್ಲೆಯ ರಾಹತಾ ಎಂಬ ಹಳ್ಳಿಯವರು. ಮುಂದೆ ರಾಜಸ್ಥಾನದ ಕೋಟಾ ಸಮೀಪದ ಪರಮಾಣು ವಿದ್ಯುತ್ ಸ್ಥಾವರವಿರುವ ರಾವತ್ಭಾಟಾ ಪಟ್ಟಣದಲ್ಲಿ ಬೆಳೆದರು.
ವೃತ್ತಿಯಿಂದ ವೈದ್ಯರಾದ ಅನುಜ್ ಅವರು, ಪ್ರತಿಷ್ಠಿತ ಏಮ್ಸ್ ಜೋಧ್ಪುರದಿಂದ 2023ರಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ್ದಾರೆ. ಅವರು ಕೇವಲ ವೈದ್ಯಕೀಯ ಪದವೀಧರರಷ್ಟೇ ಅಲ್ಲದೆ, ಈಗಾಗಲೇ DANICS ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದರು. ಯುಪಿಎಸ್ಸಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆಯುವ ಮೊದಲೇ ಇವರು DANICS (Delhi, Andaman and Nicobar Islands Civil Service) ಸೇವೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಡಾ. ಅನುಜ್ ಅಗ್ನಿಹೋತ್ರಿಯವರು ಛಲ ಬಿಡದೆ ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ ಅಗ್ರಸ್ಥಾನವನ್ನು ಪಡೆದಿದ್ದಾರೆ. ಈ ಮೂಲಕ ಐಎಎಸ್ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.