ಚೆನ್ನೈ, ಮಾ. 09 (DaijiworldNews/AA): ಚೆನ್ನೈನ ಯುನೈಟೆಡ್ ಸ್ಟೇಟ್ಸ್ನ ಕಾನ್ಸುಲೇಟ್ ಜನರಲ್ ಆಗಿ ಮರಿಯಾನಾ ಎಲ್. ನೈಶುಲರ್ ಅವರು ಅಧಿಕಾರ ಸ್ವೀಕಾರ ಮಾಡಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, "ನಮ್ಮ ದ್ವಿಪಕ್ಷೀಯ ಸಂಬಂಧದ ನಿರ್ಣಾಯಕ ಘಟ್ಟದಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವುದು ನನಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಅಧ್ಯಕ್ಷ ಟ್ರಂಪ್, ಕಾರ್ಯದರ್ಶಿ ರೂಬಿಯೋ ಮತ್ತು ರಾಯಭಾರಿ ಗೋರ್ ಅವರ ನೇತೃತ್ವದಲ್ಲಿ ಅಮೆರಿಕನ್ನರು ಮತ್ತು ಭಾರತೀಯರೆಲ್ಲರ ಏಳಿಗೆಗೆ ಪ್ರಯೋಜನವಾಗುವ ಸಹಕಾರ ನೀಡಲು ಶ್ರಮಿಸುತ್ತಿದ್ದೇವೆ" ಎಂದರು.
"ವ್ಯಾಪಾರ ಸಂಬಂಧಗಳನ್ನು ವಿಸ್ತರಿಸಲು, ಅಮೆರಿಕನ್ ಉದ್ಯಮಗಳನ್ನು ಬೆಂಬಲಿಸಲು ಮತ್ತು ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಜನರ ನಡುವಿನ ಬಾಂಧವ್ಯಗಳನ್ನು ವೃದ್ಧಿಸುವತ್ತ ಗಮನಹರಿಸುತ್ತಿದ್ದೇವೆ" ಎಂದು ತಿಳಿಸಿದರು.
ಚೆನ್ನೈಗೆ ಬರುವ ಮೊದಲು, ಕಾನ್ಸುಲೇಟ್ ಜನರಲ್ ಆಗಿರುವ ನೈಶುಲರ್ ಅವರು ತಾಷ್ಕೆಂಟ್ನಲ್ಲಿರುವ ಯುಎಸ್ ರಾಯಭಾರ ಕಚೇರಿಯಲ್ಲಿ ರಾಜಕೀಯ ಮತ್ತು ಆರ್ಥಿಕ ವ್ಯವಹಾರಗಳ ಕೌನ್ಸಿಲರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಜೆರುಸಲೆಮ್ ಮತ್ತು ಆಮ್ಮನ್ ರಾಯಭಾರ ಕಚೇರಿಗಳಲ್ಲಿ ಉಪ ಆರ್ಥಿಕ ಕೌನ್ಸಿಲರ್ ಆಗಿ, ಹಾಗೆಯೇ ವಾಷಿಂಗ್ಟನ್ ಡಿ.ಸಿ., ದುಬೈ, ಸ್ಕೋಪ್ಜೆ ಮತ್ತು ಮಾಸ್ಕೋಗಳಲ್ಲಿಯೂ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.