ನವದೆಹಲಿ, ಮಾ. 09 (DaijiworldNews/AA): ಇರಾನ್-ಇಸ್ರೇಲ್, ಅಮೆರಿಕ ನಡುವಣ ಸಂಘರ್ಷದಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ವಿಚಾರವಾಗಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಅವರು, "ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಎಲ್ಲರಿಗೂ ಆತಂಕದ ವಿಷಯವಾಗಿದೆ. ಸಮಸ್ಯೆಗಳನ್ನು ಬಗೆಹರಿಸಲು ಸಂವಾದ ಮತ್ತು ಚರ್ಚೆಯೇ ಸರಿಯಾದ ಮಾರ್ಗ. ಫೆಬ್ರವರಿ 20ರಂದು ಪತ್ರ ಬರೆದು ಸಹನಶೀಲತೆ ತೋರಿಸಿ ಉದ್ವಿಗ್ನತೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿತ್ತು. ಪ್ರಧಾನಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ" ಎಂದರು.
"ಭಾರತೀಯ ನಾಗರಿಕರ ಸುರಕ್ಷತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ. ಭಾರತ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುವ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಹೇಳಿದರು.
ಇರಾನ್ ನೌಕೆಯ ಡಾಕಿಂಗ್ ಕುರಿತು ಮಾತನಾಡಿದ ಅವರು, ಆ ಪ್ರದೇಶದಲ್ಲಿದ್ದ ಮೂರು ಹಡಗುಗಳಿಗೆ ನಮ್ಮ ಬಂದರಿಗೆ ಬರಲು ಇರಾನ್ ಅನುಮತಿ ಕೇಳಲಾಗಿತ್ತು. ಈ ಅನುಮತಿಯನ್ನು ಮಾರ್ಚ್ 3ರಂದು ನೀಡಲಾಯಿತು. ಐರಿಸ್ ಲಾವನ್ ಮಾರ್ಚ್ 4ರಂದು ಕೊಚ್ಚಿ ಬಂದರಿಗೆ ತಲುಪಿತು. ಹಡಗಿನ ಸಿಬ್ಬಂದಿ ಈಗ ಭಾರತೀಯ ನೌಕಾಪಡೆಯ ಸೌಲಭ್ಯಗಳಲ್ಲಿ ಇದ್ದಾರೆ. ಇದು ಮಾನವೀಯ ದೃಷ್ಟಿಯಿಂದ ಸರಿಯಾದ ಕ್ರಮವಾಗಿದೆ. ಈ ಮಾನವೀಯ ಸಹಾಯಕ್ಕಾಗಿ ಇರಾನ್ ವಿದೇಶಾಂಗ ಸಚಿವರು ತಮ್ಮ ದೇಶದ ಪರವಾಗಿ ಧನ್ಯವಾದ ತಿಳಿಸಿದರು.