ನವದೆಹಲಿ, ಮಾ. 09 (DaijiworldNews/TA) : ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ತೈಲ ಕೇಂದ್ರಗಳ ಮೇಲೆ ನಡೆಯುತ್ತಿರುವ ದಾಳಿಗಳು ಕೇವಲ ಆರ್ಥಿಕ ನಷ್ಟವಲ್ಲದೆ, ಭೀಕರ ಪರಿಸರ ದುರಂತಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ತೈಲ ಬಾವಿಗಳಿಗೆ ಬೆಂಕಿ ಬಿದ್ದಾಗ ಹೊರಹೊಮ್ಮುವ ದಟ್ಟ ಕಪ್ಪು ಹೊಗೆ ನೂರಾರು ಕಿಲೋಮೀಟರ್ ದೂರದವರೆಗೆ ಹರಡಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹೊಗೆಯಲ್ಲಿ ಕಾರ್ಬನ್ ಮೊನಾಕ್ಸೈಡ್, ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್ ಮುಂತಾದ ವಿಷಕಾರಿ ಅನಿಲಗಳು ಇರುವುದರಿಂದ ಅವು ಶ್ವಾಸಕೋಶ ಮತ್ತು ರಕ್ತದ ಮೇಲೆ ನೇರ ಪರಿಣಾಮ ಬೀರುತ್ತವೆ.
ಗಾಳಿಯಲ್ಲಿ ಸೇರಿದ ಈ ವಿಷಕಾರಿ ಅಂಶಗಳು ಮಳೆ ನೀರಿನೊಂದಿಗೆ ಬೆರೆತು ಆಮ್ಲ ಮಳೆಗೆ ಕಾರಣವಾಗಬಹುದು. ಇದರ ಪರಿಣಾಮವಾಗಿ ಶ್ವಾಸಕೋಶ ಸಮಸ್ಯೆಗಳು, ಚರ್ಮ ರೋಗಗಳು, ಕ್ಯಾನ್ಸರ್ ಮತ್ತು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ತಕ್ಷಣವೇ ಸಾವು ಸಂಭವಿಸದಿದ್ದರೂ ದೀರ್ಘಾವಧಿಯಲ್ಲಿ ದೇಹದ ವಿವಿಧ ಅಂಗಾಂಗಗಳಿಗೆ ಹಾನಿಯಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
1991ರಲ್ಲಿ ನಡೆದ ಗಲ್ಫ್ ಯುದ್ಧದ ವೇಳೆ ಇರಾಕ್ನ ತೈಲ ಬಾವಿಗಳಿಗೆ ಬೆಂಕಿ ಹಚ್ಚಿದ ನಂತರ “ಗಲ್ಫ್ ವಾರ್ ಸಿಂಡ್ರೋಮ್” ಎಂಬ ಸಮಸ್ಯೆ ಕಂಡುಬಂದಿತ್ತು. ಅದರ ಪರಿಣಾಮವಾಗಿ ಅಮೇರಿಕಾದ ಸಾವಿರಾರು ಸೈನಿಕರು 30 ವರ್ಷಗಳಾದರೂ ದೀರ್ಘಕಾಲದ ಆಯಾಸ, ನರಗಳ ಹಾನಿ ಹಾಗೂ ಕ್ಯಾನ್ಸರ್ನಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಇದೀಗ ಇರಾನ್ನ ಬೃಹತ್ ತೈಲ ಸಂಗ್ರಹಾಗಾರಗಳ ಮೇಲೆ ದಾಳಿ ನಡೆದರೆ, ಅದರ ಪರಿಣಾಮಗಳು 1991ರ ಗಲ್ಫ್ ಯುದ್ಧಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಅಪಾಯಕಾರಿ ಆಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ತೈಲ ಬಾವಿಗಳ ಹೊಗೆ ಪರ್ಷಿಯನ್ ಗಲ್ಫ್ ಪ್ರದೇಶವನ್ನು ದಾಟಿ ನೆರೆ ರಾಷ್ಟ್ರಗಳಿಗೂ ಹರಡುವ ಸಾಧ್ಯತೆ ಇದ್ದು, ಇದು ಜಾಗತಿಕ ಹವಾಮಾನ ವೈಪರಿತ್ಯಕ್ಕೂ ಕಾರಣವಾಗಬಹುದು. ಇದರ ಪರಿಣಾಮ ಭಾರತ ಸೇರಿದಂತೆ ದೂರದ ರಾಷ್ಟ್ರಗಳಿಗೂ ತಟ್ಟುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.