ಕಲಬುರಗಿ, ಮಾ. 08 (DaijiworldNews/AA): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿ ಮೂಗು ಹಿಡಿದುಕೊಂಡು ಕಂಟ್ರೋಲ್ ಮಾಡುತ್ತಿದ್ದಾನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ, ಸಂಘ ಪರಿವಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, "ಅಮೆರಿಕಗೆ ಇವತ್ತು ಸೊಕ್ಕು ಬಂದಿದೆ. ಇಡೀ ಜಗತ್ತಿಗೆ ಹೆದರಿಸುವ ಕೆಲಸವನ್ನು ಅಮೆರಿಕ ಮಾಡುತ್ತಿದೆ. ಇದರಿಂದ ವಿಶ್ವದಲ್ಲಿ ಶಾಂತಿ ನೆಲೆಸೋದಿಲ್ಲ. ಅಮೆರಿಕ ದಬ್ಬಾಳಿಕೆ ಮಾಡುವ ಕೆಲಸ ಮಾಡುತ್ತಿದೆ. ಇಂತಹ ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಸೇರಿಕೊಂಡು ಮೋದಿಯವರು ನಮ್ಮ ದೇಶ ಹಾಳು ಮಾಡುತ್ತಿದ್ದಾರೆ. ಟ್ರಂಪ್ ಒಬ್ಬ ಡಿಕ್ಟೇಟರ್, ಮೋದಿ ಅವನ ಗುಲಾಮ. ಮೋದಿ ಈ ದೇಶವನ್ನ ಗುಲಾಮಗಿರಿಗೆ ಒಯ್ಯುವ ಕೆಲಸ ಮಾಡುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ಊರೂರು ತಿರುಗೋದು, ಚುನಾವಣೆ ಭಾಷಣ ಮಾಡೋದು, ಕಾಂಗ್ರೆಸ್ಗೆ ಬೈಯೋದೆ ಮೋದಿ ಕೆಲಸ. ಕಾಂಗ್ರೆಸ್ಗೆ ಬೈಯೋದು ಜನರ ಗಮನ ಬೇರೆಡೆ ಸೆಳೆಯೋದೇ ಮೋದಿ ಕೆಲಸ. ದೇಶ ಕಟ್ಟುವ ಕೆಲಸ ಕಾಂಗ್ರೆಸ್ ಮಾಡಿದ್ರೆ, ಇವತ್ತು ದೇಶ ಹಾಳು ಮಾಡುವ ಕೆಲಸ ಮೋದಿ ಮಾಡುತ್ತಿದ್ದಾರೆ. ಮೋದಿ ಯಾರ ಜೊತೆಗೂ ಸರಿಯಿಲ್ಲ. ಇಂತಹ ಜನ ನಮ್ಮ ದೇಶದಲ್ಲಿ ಹುಟ್ಟಿದ್ದಾರೆ. ಇಂಥವರಿಗೆ ಜನ ಪಾಠ ಕಲಿಸುವ ಕೆಲಸ ಮಾಡಬೇಕು" ಎಂದು ವಾಗ್ದಾಳಿ ನಡೆಸಿದರು.
"ಮೊದಲು ಆರ್ಎಸ್ಎಸ್, ಬಿಜೆಪಿಯವರು ಬ್ರಿಟಿಷರ ಕೈಕೆಳಗೆ ಕೆಲಸ ಮಾಡುತ್ತಿದ್ದರು. ಈಗ ಎಪ್ಸ್ಟೀನ್ ಫೈಲ್ ಇಟ್ಟುಕೊಂಡು ಟ್ರಂಪ್ ಮೋದಿಯನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ರ್ಯಾರು ಎಲ್ಲೆಲ್ಲಿ ಹೋಗಿದ್ದಾರೆ? ಏನೇನು ಮಾಡಿದ್ದಾರೆ? ಯಾವ ಕ್ಲಬ್, ಯಾವ ಐಲ್ಯಾಂಡ್ನಲ್ಲಿ ಏನೇನು ಮಜಾ ಮಾಡಿದ್ದಾರೆ ಎಲ್ಲವೂ ಇದೆ. ಅದೆಲ್ಲವನ್ನೂ ಹಿಡಿದುಕೊಂಡು ಟ್ರಂಪ್ ಕಂಟ್ರೋಲ್ ಮಾಡುತ್ತಿದ್ದಾನೆ. ಆ ಫೈಲ್ನಿಂದ ಹೆದರಿ ಮೋದಿ ಟ್ರಂಪ್ಗೆ ತಲೆ ಬಾಗಿದ್ದಾರೆ, ಬಾಯಿ ಬಂದ್ ಆಗಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.