ಬೆಂಗಳೂರು, ಮಾ. 08 (DaijiworldNews/AA): ಪ್ರತಿ ವರ್ಷ ಮಾರ್ಚ್ 8ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದು ಕೇವಲ ಒಂದು ದಿನದ ಆಚರಣೆಯಲ್ಲ, ಬದಲಾಗಿ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿನ ಮಹಿಳೆಯರ ಸಾಧನೆಗಳನ್ನು ಗುರುತಿಸಿ ಗೌರವಿಸಲು, ಲಿಂಗ ಸಮಾನತೆ, ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸಲು ಹಾಗೂ ಮಹಿಳೆಯರ ಕಠಿಣ ಪರಿಶ್ರಮ, ಪ್ರೀತಿ ಮತ್ತು ಕೊಡುಗೆಗಳನ್ನು ಗೌರವಿಸಲು ಆಚರಿಸಲಾಗುತ್ತದೆ.

1908 ರಲ್ಲಿ, ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ನಲ್ಲಿ ಕಡಿಮೆ ಕೆಲಸದ ಸಮಯ, ಉತ್ತಮ ವೇತನ ಮತ್ತು ಮತದಾನದ ಹಕ್ಕಿಗಾಗಿ ಪ್ರತಿಭಟಿಸಿದರು. ಈ ಪ್ರತಿಭಟನೆಯನ್ನು ಅಂತಾರಾಷ್ಟ್ರೀಯ ಮಹಿಳಾ ದಿನದ ಅಡಿಪಾಯವೆಂದು ಪರಿಗಣಿಸಲಾಗುತ್ತದೆ. ಇದಾದ ಸುಮಾರು 2 ವರ್ಷಗಳ ಬಳಿಕ, ಅಂದರೆ 1910 ರಲ್ಲಿ, ಕ್ಲಾರಾ ಜೆಟ್ಕಿನ್ ಅವರು ಕೋಪನ್ ಹ್ಯಾಗನ್ನಲ್ಲಿ ನಡೆದ ಸಮ್ಮೇಳನದಲ್ಲಿ 'ಅಂತರರಾಷ್ಟ್ರೀಯ ಮಹಿಳಾ ದಿನ'ವನ್ನು ಆಚರಿಸಲು ಪ್ರಸ್ತಾಪಿಸಿದರು.
1911 ರಲ್ಲಿ, ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ನಲ್ಲಿ ಮೊದಲ ಬಾರಿಗೆ ಮಹಿಳಾ ದಿನವನ್ನು ಆಚರಣೆ ಮಾಡಲಾಯಿತು. ಬಳಿಕ ವಿಶ್ವಸಂಸ್ಥೆಯು 1975ರಲ್ಲಿ ಮಾರ್ಚ್ ೮ನ್ನು ಅಧಿಕೃತವಾಗಿ 'ಅಂತರಾಷ್ಟ್ರೀಯ ಮಹಿಳಾ ದಿನ' ಎಂದು ಘೋಷಣೆ ಮಾಡಿತು. ಅಂದಿನಿಂದ ಮಹಿಳಾ ದಿನವನ್ನು ಮಾರ್ಚ್ 8 ರಂದು ಆಚರಿಸಲಾಗುತ್ತಿದೆ.
ರಷ್ಯಾದ ಮಹಿಳೆಯರು 1917ರ ಮಾರ್ಚ್ 8 ರಂದು ಆಹಾರ ಮತ್ತು ಶಾಂತಿಗಾಗಿ ಒತ್ತಾಯಿಸಿ ಐತಿಹಾಸಿಕ ಮುಷ್ಕರವನ್ನು ಆಯೋಜಿಸಿದ್ದರು. ಚಳುವಳಿ ಎಷ್ಟು ವ್ಯಾಪಕವಾಯಿತು ಎಂದರೆ ಚಕ್ರವರ್ತಿಯನ್ನು ಪಟ್ಟದಿಂದ ತ್ಯಜಿಸಲು ಒತ್ತಾಯಿಸಲಾಯಿತು ಮತ್ತು ಮಧ್ಯಂತರ ಸರ್ಕಾರವು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿತು. ಈ ಐತಿಹಾಸಿಕ ಹೋರಾಟದ ನೆನಪಿಗಾಗಿ ಮಾರ್ಚ್ 8 ರಂದು ಮಹಿಳಾ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆಯು ಆಯ್ಕೆ ಮಾಡಿತು.
2026ರ ಅಂತರಾಷ್ಟ್ರೀಯ ಮಹಿಳಾ ದಿನದ ಮುಖ್ಯ ಥೀಮ್ "ಗಿವ್ ಟು ಗೈನ್"(ಪಡೆಯಲು ನೀಡಿ) ಆಗಿದೆ. ಈ ಅಭಿಯಾನವು ಮಹಿಳೆಯರ ಸಬಲೀಕರಣಕ್ಕಾಗಿ ಜ್ಞಾನ, ಸಮಯ, ಸಂಪನ್ಮೂಲಗಳು ಮತ್ತು ಮಾರ್ಗದರ್ಶನವನ್ನು ಉದಾರವಾಗಿ ನೀಡುವ ಮೂಲಕ ಸಮಾನತೆ ಮತ್ತು ಜಂಟಿ ಪ್ರಗತಿಯನ್ನು ವೇಗಗೊಳಿಸಲು ಕರೆ ನೀಡುತ್ತದೆ.
2026ರ ಮಹಿಳಾ ದಿನದ ಪ್ರಮುಖಾಂಶಗಳು:
2026ರ ಅಂತರಾಷ್ಟ್ರೀಯ ಮಹಿಳಾ ದಿನದ ಜಾಗತಿಕ ಥೀಮ್ ಆಗಿರುವ 'ಗಿವ್ ಟು ಗೈನ್'- ಪರಸ್ಪರ ಬೆಂಬಲ ಮತ್ತು ಸಾಮೂಹಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಮಹಿಳೆಯರು ಬೆಳೆಯಲು ಮತ್ತು ಯಶಸ್ವಿಯಾಗಲು ಅಗತ್ಯವಾದ ಅವಕಾಶಗಳನ್ನು ಒದಗಿಸುವ ಮೂಲಕ ಸಮಾಜವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ. ಮಹಿಳೆಯರ ಅಭಿವೃದ್ಧಿಯು ಕೇವಲ ವೈಯಕ್ತಿಕವಲ್ಲ, ಅದು ಇಡೀ ಸಮಾಜದ ಪ್ರಗತಿ ಎಂಬುದು ಈ ಥೀಮ್ನ ಮುಖ್ಯ ಸಂದೇಶವಾಗಿದೆ. ಈ ಥೀಮ್, ಮಹಿಳೆಯರ ಆಕಾಂಕ್ಷೆಗಳನ್ನು ಬೆಂಬಲಿಸಲು ಮತ್ತು ಲಿಂಗ ಸಮಾನತೆಯನ್ನು ಸಾಧಿಸಲು ಎಲ್ಲರೂ ಕೈಜೋಡಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸುತ್ತದೆ.