ನವದೆಹಲಿ, ಮಾ. 08 (DaijiworldNews/AA): ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಚಿಕ್ಕಪ್ಪ ಅಭಿಷೇಕ್ ಚೌಹಾಣ್ ಅವರು 102ನೇ ರ್ಯಾಂಕ್ ಗಳಿಸಿದ್ದಾರೆ.

ಭಾರತದ ಅಂಡರ್-19 ವಿಶ್ವಕಪ್ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಚಿಕ್ಕಪ್ಪ ಅಭಿಷೇಕ್ ಚೌಹಾಣ್ ಅವರು 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ 102ನೇ ರ್ಯಾಂಕ್ ಗಳಿಸುವ ಮೂಲಕ ಅವರು ಐಪಿಎಸ್ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಹಾರದ ಸಮಸ್ತಿಪುರ್ ಜಿಲ್ಲೆಯ ನಿವಾಸಿಯಾಗಿರುವ ಅಭಿಷೇಕ್ ಅವರು ಪ್ರೊಫೆಸರ್ ಡಾ. ಅಭಯ್ ಕುಮಾರ್ ಸಿಂಗ್ ಮತ್ತು ಅನುರಾಧಾ ರಜಪೂತ್ ಅವರ ಪುತ್ರ. ಅವರ ತಂದೆ ನಳಂದ ಮುಕ್ತ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
2022ರಿಂದ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭಿಷೇಕ್ ಅವರು 2025ರಲ್ಲಿ ಪ್ರಾಥಮಿಕ ಮತ್ತು ಮುಖ್ಯ ಹಂತಗಳೆರಡಲ್ಲಿಯೂ ತೇರ್ಗಡೆಹೊಂದಿದ್ದಾರೆ. ಈ ಮೂಲಕ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಹಾಗೂ ಅವರ ಚಿಕ್ಕಪ್ಪ ಅಭಿಷೇಕ್ ಚೌಹಾಣ್ ಅನೇಕ ಯುವಕರಿಗೆ ಮಾದರಿಯಾಗಿದ್ದಾರೆ.