ಬೆಂಗಳೂರು, ಮಾ. 06 (DaijiworldNews/TA): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಬಜೆಟ್ ಗಾತ್ರ ರೂ.4.48 ಲಕ್ಷ ಕೋಟಿ ರೂಪಾಯಿಯಾಗಿದ್ದು, ಕಳೆದ ವರ್ಷದ ಬಜೆಟ್ಗಿಂತ ಸುಮಾರು ರೂ.40 ಸಾವಿರ ಕೋಟಿ ಹೆಚ್ಚಳವಾಗಿದೆ.

ಸುಮಾರು 3 ಗಂಟೆ 5 ನಿಮಿಷಗಳ ಕಾಲ ನಿರರ್ಗಳವಾಗಿ ಬಜೆಟ್ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ, ರೈತರು, ಧಮನಿತರು ಹಾಗೂ ಕಾರ್ಮಿಕರ ಪರ ಬಜೆಟ್ ಇದಾಗಿದೆ ಎಂದು ಹೇಳಿದರು. 2026–27ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರೂ. 3.15 ಲಕ್ಷ ಕೋಟಿ ರಾಜಸ್ವ ಸಂಗ್ರಹ ಗುರಿಯನ್ನು ಹೊಂದಿದೆ. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಮೂಲಕ ಹೆಚ್ಚಿನ ಬಂಡವಾಳ ಹೂಡಿಕೆ ಆಕರ್ಷಣೆ ಹಾಗೂ ನಗರಾಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
3 ಗಂಟೆ 5 ನಿಮಿಷ ನಿರಂತರ ಬಜೆಟ್ ಭಾಷಣ : ಸಿಎಂ ಸಿದ್ದರಾಮಯ್ಯ ಅವರು 3 ಗಂಟೆ 5 ನಿಮಿಷಗಳ ಕಾಲ ನಿಂತುಕೊಂಡೇ ಬಜೆಟ್ ಭಾಷಣ ಮಾಡಿದರು. ಕಾಲು ನೋವು ಇರುವ ಕಾರಣ ಮಧ್ಯೆ ಕುಳಿತುಕೊಳ್ಳುವಂತೆ ಕೆಲವರು ಸಲಹೆ ನೀಡಿದರೂ ಸಾಧ್ಯವಾದಷ್ಟು ನಿಂತುಕೊಂಡೇ ಓದುವೆ ಎಂದು ಹೇಳಿ ತಮ್ಮ ದಾಖಲೆ 17ನೇ ಬಜೆಟ್ ಮಂಡಿಸಿದರು. ಬಳಿಕ ಸಂಪುಟ ಸಹೋದ್ಯೋಗಿಗಳೊಂದಿಗೆ ಫೋಟೋ ತೆಗೆಸಿಕೊಂಡರು. ಬಜೆಟ್ ಮೇಲಿನ ಚರ್ಚೆಯನ್ನು ಸೋಮವಾರಕ್ಕೆ ನಿಗದಿಪಡಿಸಲಾಗಿದೆ.
ಕರ್ನಾಟಕ ಬಜೆಟ್ 2026 ಮುಖ್ಯಾಂಶಗಳು:
ಆಡಳಿತ ಮತ್ತು ಉದ್ಯೋಗ :
* ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 11G ಮಾದರಿ ಆರ್ಥಿಕತೆ ಘೋಷಣೆ
* ಪ್ರಸಕ್ತ ವರ್ಷದಲ್ಲಿ 56,432 ಉದ್ಯೋಗ ನೇಮಕಾತಿ
ಶಿಕ್ಷಣ :
* ರಾಜ್ಯದಾದ್ಯಂತ 800 ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಸರ್ಕಾರಿ ಶಾಲೆಗಳು ಆರಂಭ
* ಎಲ್ಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಪುನರಾರಂಭ
* ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಭಾಗ್ಯ
ಮಹಿಳಾ ಮತ್ತು ಸಾಮಾಜಿಕ ಭದ್ರತೆ :
* ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ‘ಅಕ್ಕ ಪಡೆ’ ಆರಂಭ
* ಬಾಣಂತಿಯರಿಗೆ ಬಿಸಿಯೂಟ ಯೋಜನೆ
* ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಇನ್ಸುಲಿನ್
ಅನ್ನಭಾಗ್ಯ ಯೋಜನೆ :
* 5 ಕೆಜಿ ಅಕ್ಕಿ ಜೊತೆಗೆ ‘ಇಂದಿರಾ ಕಿಟ್’ ವಿತರಣೆ
* ಇಂದಿರಾ ಕಿಟ್ನಲ್ಲಿ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ, ಹೆಸರುಕಾಳು ಮತ್ತು ಉಪ್ಪು
ಕೃಷಿ ಮತ್ತು ರೈತರಿಗಾಗಿ :
* 38 ಲಕ್ಷ ರೈತರಿಗೆ ಸಾಲ ನೀಡಲು ರೂ.30,000 ಕೋಟಿ ಮೀಸಲು
* ರೂ. 100 ಕೋಟಿ ವೆಚ್ಚದಲ್ಲಿ ಕೃಷಿ ವಿಸ್ತಾರ ಯೋಜನೆ
* ಕೋಲಾರದಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್ ಮತ್ತು ರೈತ ಮಾಲ್
ಬೆಂಗಳೂರು ಅಭಿವೃದ್ಧಿ:
* ಬೆಂಗಳೂರಿನ ಅಭಿವೃದ್ಧಿಗೆ ರೂ.7,000 ಕೋಟಿ ಮೀಸಲು
* ನಗರದಲ್ಲಿ 40 ಕಿ.ಮೀ ಸುರಂಗ ಮಾರ್ಗ ನಿರ್ಮಾಣ ಯೋಜನೆ
* ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಹಲವು ಯೋಜನೆಗಳು
* ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ
ಇತರೆ ಪ್ರಮುಖ ಘೋಷಣೆಗಳು:
* ಮೈಸೂರನ್ನು ಎರಡನೇ ಐಟಿ ರಾಜಧಾನಿಯಾಗಿ ಅಭಿವೃದ್ಧಿ
* ಕಲ್ಯಾಣ ಕರ್ನಾಟಕದಲ್ಲಿ ರೂ.1,000 ಕೋಟಿ ವೆಚ್ಚದಲ್ಲಿ 1,124 ಕಿ.ಮೀ ‘ಕಲ್ಯಾಣ ಪಥ’
* ರಾಜ್ಯಾದ್ಯಂತ 1,250 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ಗಳು
* ಬೆಂಗಳೂರು ಮತ್ತು ಬೀದರ್ನಲ್ಲಿ ಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರ
* ಪಶುಗಳ ರೋಗ ಪತ್ತೆಗಾಗಿ ಸಿಟಿ ಸ್ಕ್ಯಾನಿಂಗ್ ಕೇಂದ್ರ ಸ್ಥಾಪನೆ
ಒಟ್ಟಾರೆ 'ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ ಹಾಗೂ ನವ ಕರ್ನಾಟಕದ ನಿರ್ಮಾಣ' ಎಂಬ ದೂರದೃಷ್ಟಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಜೆಟ್ ಮಂಡಿಸಿದ್ದು, ವಸತಿ, ಕೃಷಿ, ನೀರಾವರಿ, ಶಿಕ್ಷಣ ಹಾಗೂ ಮಹಿಳಾ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.