ಬೆಂಗಳೂರು, 06 (DaijiworldNews/AK): ಸಿಎಂ ಸಿದ್ದರಾಮಯ್ಯ ದಾಖಲೆಯ 17 ನೇ ಬಜೆಟ್ ಮಂಡಿಸುತ್ತಿದ್ದು, ರಾಜ್ಯದ ಜನರಲ್ಲಿ ನಿರೀಕ್ಷೆ ಹೆಚ್ಚಿಸಿದೆ. 2026-27 ನೇ ಬಜೆಟ್ ಮೇಲೆ ತೀವ್ರ ಕುತೂಹಲ ನೆಟ್ಟಿದೆ.

56,432 ಹುದ್ದೆ ಭರ್ತಿ ಮಾಡುವ ಬಗ್ಗೆ ಸಿಎಂ ಘೋಷಣೆ ಮಾಡಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಇದು ಸಿಹಿ ಸುದ್ದಿಯಾಗಿದೆ. ಬಜೆಟ್ - 4.48 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗುತ್ತದೆ.
ರಾಜ್ಯದ ಪ್ರಮುಖ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದರ ಮೂಲಕ ಆಡಳಿತ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದೇವೆ. ನಮ್ಮ ಚುನಾವಣಾ ಪ್ರಣಾಳಿಕೆಯಂತೆ ಉದ್ಯೋಗ ಸೃಷ್ಟಿಗೆ ನಾವು ಆದ್ಯತೆ ನೀಡಿದ್ದೇವೆ. ಈ ವರ್ಷ 56,432 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಉದ್ಯೋಗ ನೇಮಕಾತಿಗಳಲ್ಲಿ ನ್ಯಾಯಾಲಯದ ಪ್ರಕರಣಗಳಿಂದ ಉಂಟಾಗಿದ್ದ ವಿಳಂಬವನ್ನು ಪರಿಗಣಿಸಿ ವಯೋಮಿತಿಯಲ್ಲಿ ಒಂದು ಬಾರಿಗೆ ಐದು ವರ್ಷಗಳ ಸಡಿಲಿಕೆ ನೀಡಿದ್ದೇವೆ ಎಂದಿದ್ದಾರೆ.
ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಯಲ್ಲಿ ರಾಜ್ಯದ ರಸ್ತೆ, ಸೇತುವೆ, ಕಟ್ಟಡಗಳ ನಿರ್ಮಾಣಕ್ಕೂ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ಇಲಾಖಾವಾರು ನೀಡುವ ಅನುದಾನಗಳನ್ನು ಹೊರತುಪಡಿಸಿ ಕಳೆದ ವರ್ಷ ರಸ್ತೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗಾಗಿ "ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ವನ್ನು ಜಾರಿಗೊಳಿಸಿ 8,600 ಕೋಟಿ ರೂ. ಗಳ ಅನುದಾನ ನೀಡಿದೆ.